ಬೆಂಗಳೂರು: ಐಪಿಎಲ್‌ನ ಅತ್ಯಂತ ನತದೃಷ್ಟ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಈ ಬಾರಿಯೂ ಕಪ್ ಗೆಲ್ಲುವಲ್ಲಿ ವಿಫಲವಾಯಿತು. ಪ್ಲೇ ಆಫ್ಗೇರುವ ಮಹತ್ವದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ದ 6 ವಿಕೆಟ್ ಅಂತರದ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತು. ಸೋಲಿನಿಂದ ಆರ್ಸಿಬಿ ಅಭಿಮಾನಿಗಳ ಈ ಸಲ ಕಪ್ ನಮ್ದೇ ಅಭಿಯಾನ ಮುಂದಿನ ಆವೃತ್ತಿಗೂ ಮುಂದುವರಿದಿದೆ. ಚೇಸಿಂಗ್ ವೇಳೆ ಶುಭಮನ್ ಗಿಲ್(104*) ಅಜೇಯ ಶತಕ ಬಾರಿಸಿ ಆರ್ಸಿಬಿಯ ಗೆಲುವು ಕಸಿದರು.
ಆರ್ಸಿಬಿಯ ಈ ಸೋಲಿನಿಂದ ಮುಂಬೈ ತಂಡ ಪ್ಲೇ ಆಫ್ ಪ್ರವೇಶಿಸಿತು. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಮುಂಬೈ ತಂಡ ಹೈದರಾಬಾದ್ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿತ್ತು. ಸಾರಸ್ಯವೆಂದರೆ ಕಳೆದ ವರ್ಷ ಮುಂಬೈ ತಂಡ ಡೆಲ್ಲಿ ತಂಡವನ್ನು ಮಣಿಸಿದ ಪರಿಣಾಮ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಿತ್ತು. ಆದರೆ ಈ ಬಾರಿ ಆರ್ಸಿಬಿ ಸೋಲುವ ಮೂಲಕ ಮುಂಬೈ ತಂಡಕ್ಕೆ ಪ್ಲೇ ಆಫ್ ಅವಕಾಶ ನೀಡಿತು.
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಳೆಯಿಂದ ವಿಳಂಬವಾಗಿ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್ಸಿಬಿ ವಿರಾಟ್ ಕೊಹ್ಲಿಯ ಅಜೇಯ ಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿತು. ಗುರಿ ಬೆನ್ನಟಿದ ಗುಜರಾತ್ 19.1 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 198 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಬೃಹತ್ ಮೊತ್ತವನ್ನು ದಿಟ್ಟ ರೀತಿಯಿಂದ ಬೆನ್ನಟ್ಟಿದ ಗುಜರಾತ್ ತಂಡ ಯಾವುದೇ ಆತಂಕವಿಲ್ಲದೆ ಬ್ಯಾಟಿಂಗ್ ನಡೆಸಿತು. ಟೀಮ್ ಇಂಡಿಯಾದ ಭವಿಷ್ಯದ ಕೊಹ್ಲಿ ಎಂದೇ ಖ್ಯಾತಿ ಪಡೆದ ಶುಭಮನ್ ಗಿಲ್ ಮತ್ತು ದ್ವಿತೀಯ ವಿಕೆಟ್ಗೆ ಜತೆಯಾದ ವಿಜಯ್ ಶಂಕರ್ ಸೇರಿಕೊಂಡು ಆರ್ಸಿಬಿಯ ಗೆಲುವಿಗೆ ಕೊಳ್ಳಿ ಇಟ್ಟರು.
ಇದನ್ನೂ ಓದಿ IPL 2023: ಮತ್ತೆ ಸೊನ್ನೆ ಸುತ್ತಿದ ದಿನೇಶ್ ಕಾರ್ತಿಕ್; ಡಕ್‌ಔಟ್‌ನಲ್ಲಿ ಈಗ ರೋಹಿತ್ ಶರ್ಮಾಗಿಂತ ಮುಂದು
ಯಾವತ್ತೂ ಆಡದ ವಿಜಯ್ ಶಂಕರ್ ಅವರು ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಆರ್ಸಿಬಿಯ ಗೆಲುವಿಗೆ ಕಂಟಕವಾದರು. 35 ಎಸೆತಗಳಲ್ಲಿ 53 ರನ್ ಚಚ್ಚಿದರು. ಇದರಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿತು. ದ್ವಿತೀಯ ವಿಕೆಟ್ಗೆ ಗಿಲ್ ಜತೆಗೂಡಿ 123 ರನ್ಗಳ ಜತೆಯಾಟ ನಡೆಸಿದರು. ಆದರೆ ಈ ವಿಕೆಟ್ ಪತನದ ಬಳಿಕ ಬಂದ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಶುನ್ ಶನಕ ಖಾತೆ ತೆರಯುವ ಮುನ್ನವೇ ವಿಕೆಟ್ ಕೈಚೆಲ್ಲಿದರು. ಈ ವೇಳೆ ತಂಡ ಕೊಂಚ ಆತಂಕಕ್ಕೆ ಸಿಲುಕಿತು. ಆದರೆ ಶುಭಮನ್ ಗಿಲ್ ನಿಂತು ಆಡುವ ಮೂಲಕ ತಂಡದ ಗೆಲುವನ್ನು ಸಾರಿದರು. ಗಿಲ್ ಆರಂಭಿಕನಾಗಿ ಕಣಕ್ಕಿಳಿದು ಅಜೇಯವಾಗಿ 104 ರನ್ ಬಾರಿಸಿ ಮಿಂಚಿದರು. ಅವರ ಈ ಸೊಗಸಾದ ಇನಿಂಗ್ಸ್ನಲ್ಲಿ ಬರೋಬ್ಬರಿ 8 ಸಿಕ್ಸರ್ ಮತ್ತು 5 ಬೌಂಡರಿ ಸಿಡಿಯಿತು. ಇದು ಗಿಲ್ ಅವರು ಈ ಆವೃತ್ತಿಯಲ್ಲಿ ಬಾರಿಸಿದ ದ್ವಿತೀಯ ಶತಕವಾಗಿದೆ.
ಕೈ ಹಿಡಿಯದ ಅದೃಷ್ಟ
ಪಂದ್ಯಕ್ಕೂ ಮುನ್ನ ಸುರಿದ ಭಾರಿ ಮಳೆಯಿಂದಾಗಿ ಪಂದ್ಯ ನಡೆಯುವುದೇ ಅನುಮಾನ ಎಂಬಂತ್ತಿತ್ತು. ಈ ವೇಳೆ ಆರ್ಸಿಬಿ ಅಭಿಮಾನಿಗಳು ಆತಂಕಗೊಂಡಿದ್ದರು. ಆದರೆ ಪಂದ್ಯ ಆರಂಭಗೊಳ್ಳುವ ಅರ್ಧ ತಾಸಿಗೆ ಮುನ್ನ ಮಳೆ ನಿಂತು ಪಂದ್ಯಕ್ಕೆ ಅನುವು ಮಾಡಿಕೊಟ್ಟಿತು. ಅಭಿಮಾನಿಗಳು ನಿಟ್ಟುಸಿರು ಬಿಟ್ಟರು. ಆದರೆ ಅದೃಷ್ಟವೆಂಬುವುದು ಆರ್ಸಿಬಿ ಪಾಲಿಗೆ ಕಬ್ಬಿಣದ ಕಡಲೆಯಾಗದ ಪರಿಣಾಮ ಪಂದ್ಯ ಸೋಲು ಕಂಡಿತು.
ಐಪಿಎಲ್ನಲ್ಲಿ ಶತಕ ಬಾರಿಸಿ ದಾಖಲೆ ಬರೆದ ವಿರಾಟ್ ಕೊಹ್ಲಿ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆರ್ಸಿಬಿ ಪರ ಕೊಹ್ಲಿ ಶತಕ ಬಾರಿಸಿ ಮಿಂಚಿದ್ದರು. ತಂಡದ ಸಂಕಷ್ಟದ ಸಂದರ್ಭದಲ್ಲಿಯೂ ಆಪದ್ಬಾಂಧವನಂತೆ ಎದೆಯೊಡ್ಡಿ ನಿಂತ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದರು. ಜತೆಗೆ ಶತಕದೊಂದಿಗೆ ಐಪಿಎಲ್ನಲ್ಲಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಐಪಿಎಲ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಕ್ರಿಸ್ ಗೇಲ್ ಅವರ ಜತೆ ಜಂಟಿ ದಾಖಲೆ ಬರೆದಿದ್ದರು. ಇದೀಗ 7 ಶತಕದೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. 60 ಎಸೆತಗಳಲ್ಲಿ ಶತಕ ಪೂರೈಸಿದ ಕೊಹ್ಲಿ ಅಂತಿಮವಾಗಿ 13 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 101 ರನ್ ಗಳಿಸಿದರು. ಆದರೆ ತಂಡ ಸೋತ ಕಾರಣ ಅವರ ಈ ಶತಕ ವ್ಯರ್ಥವಾಯಿತು.