ಕೋಲ್ಕೊತಾ: ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ವಿರುದ್ಧದ ಐಪಿಎಲ್ನ(IPL 2023) 9ನೇ ಪಂದ್ಯ ಆರಂಭಕ್ಕೆ ಇನ್ನೇನು ಕೆಲವೇ ನಿಮಿಷಗಳು ಬಾಕಿ ಉಳಿದಿದೆ. ಈ ಮಧ್ಯೆ ಆರ್‌ಸಿಬಿ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಮಾಡುವುದಾಗಿ ತಿಳಿದುಬಂದಿದೆ.
ಮುಂಬೈ ಇಂಡಿಯನ್ಸ್ ವಿರುದ್ಧ ಕಳೆದ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ರೀಸ್ ಟಾಪ್ಲಿ(Reece Topley) ಬದಲು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಿಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ. ರೀಸ್ ಟಾಪ್ಲಿ ಅವರಿಗೆ ಸದ್ಯ ಗಂಭೀರ ಗಾಯವಾಗಿಲ್ಲ. ಆದರೆ ಮುಂಜಾಗ್ರತ ಕ್ರಮವಾಗಿ ಅವರನ್ನು ಈ ಪಂದ್ಯದಲ್ಲಿ ಆಡಿಸುವುದಿಲ್ಲ ಎಂದು ತಂಡದ ಮೂಲವೊಂದು ತಿಳಿಸಿದೆ.
ಹೈ ವೋಲ್ಟೇಜ್ ಪಂದ್ಯ
ಕೊರೊನಾಕ್ಕೂ ಮುನ್ನ, 2019ರ ಏಪ್ರಿಲ್ 28ರಂದು ಇಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಕೊನೆಯ ಐಪಿಎಲ್ ಪಂದ್ಯ ನಡೆದಿತ್ತು. ಇದೀಗ ಬರೋಬ್ಬರಿ 1,438 ದಿನಗಳ ಬಳಿಕ ಇಲ್ಲಿ ಪಂದ್ಯ ನಡೆಯುತ್ತಿದೆ. ತವರಿನಲ್ಲಿ ನಡೆಯುವ ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡುವ ಇರಾದೆ ಕೆಕೆಆರ್ ತಂಡದ್ದಾಗಿದೆ. ಇನ್ನೊಂಡೆದೆ ಭರ್ಜರಿ ಫಾರ್ಮ್ನಲ್ಲಿಯುವ ಆರ್‌ಸಿಬಿ ಈ ಪಂದ್ಯದಲ್ಲಿಯೂ ಗೆದ್ದು ಅಜೇಯ ಓಟ ಮುಂದುವರಿಸುವ ಯೋಜನೆಯಲ್ಲಿದೆ. ಹೀಗಾಗಿ ಈ ಪಂದ್ಯ ಹೈ ವೋಲ್ಟೇಜ್ ಎಂದು ನಿರೀಕ್ಷಿಸಬಹುದು.
ಇದನ್ನೂ ಓದಿ IPL 2023: ಆರ್‌ಸಿಬಿ ಈ ಬಾರಿಯೂ ಕಪ್ ಗೆಲ್ಲಲ್ಲ; ಎಬಿಡಿ ವಿಲಿಯರ್ಸ್ ಅಚ್ಚರಿಯ ಹೇಳಿಕೆ
ಆರ್‌ಸಿಬಿ ವಿರುದ್ಧ ಉತ್ತಮ ರೆಕಾರ್ಡ್ ಹೊಂದಿರುವ ಆ್ಯಂಡ್ರೆ ರಸೆಲ್ ಮತ್ತು ಸುನೀಲ್ ನಾರಾಯಣ್ ಅವರು ಈ ಪಂದ್ಯದಲ್ಲಿಯೂ ತಮ್ಮ ಹಳೇಯ ಪ್ರದರ್ಶನ ತೋರ್ಪಡಿಸಿದ್ದಲ್ಲಿ ತಂಡಕ್ಕೆ ಗೆಲುವು ಖಚಿತ ಎನ್ನಲಡ್ಡಿಯಿಲ್ಲ. ರಸೆಲ್ ಅವರಂತು ಆರ್‌ಸಿಬಿ ವಿರುದ್ಧ ಸೇಡಿನ ಪಂದ್ಯದಂತೆ ಬ್ಯಾಟಿಂಗ್ ನಡೆಸುತ್ತಾರೆ. ಈ ಹಿಂದೆ ಹಲವು ಪಂದ್ಯಗಳಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಆರ್‌ಸಿಬಿ ಗೆಲುವನ್ನು ಕಸಿದಿದ್ದಾರೆ. ಹೀಗಾಗಿ ಆರ್‌ಸಿಬಿ ಬೌಲರ್ಗಳು ಇವರ ಮೇಲೆ ಒಂದು ನಿಗಾ ಇರಿಸುವುದು ಅತ್ಯಗತ್ಯ.
ಆರ್‌ಸಿಬಿ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೈಕಲ್ ಬ್ರೇಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್.