ಹೈದರಾಬಾದ್: ಸನ್ರೈಸರ್ಸ್ ವಿರುದ್ಧ ಸಣ್ಣ ಮೊತ್ತ ಬಾರಿಸಿದರೂ ಅದನ್ನು ಉಳಿಸಿಕೊಳ್ಳವಲ್ಲಿ ಯಶಸ್ವಿಯಾದ ಡೆಲ್ಲಿ ಕ್ಯಾಪಿಟಲ್ಸ್ 7 ರನ್ಗಳ ರೋಚಕ ಗೆಲುವು ಸಾಧಿಸಿತು. ಆದರೆ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಕಾರಣ ಡೆಲ್ಲಿ ನಾಯಕ ಡೇವಿಡ್ ವಾರ್ನರ್ಗೆ ದಂಡದ ಬರೆ ಬಿದ್ದಿದೆ.
ನಿಗದಿತ ಸಮಯಕ್ಕಿಂತಲೂ ಹೆಚ್ಚು ಅವಧಿ ತೆಗೆದುಕೊಂಡಲ್ಲಿ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ನಾಯಕನಿಗೆ ದಂಡ ವಿಧಿಸಲಾಗುತ್ತದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅವಧಿಗಿಂತಲೂ 2 ಓವರ್ ಹಿಂದಿತ್ತು. ಹೀಗಾಗಿ ನಾಯಕ ಡೇವಿಡ್ ವಾರ್ನರ್ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಡೆಲ್ಲಿ ತಂಡದ ಮೊದಲ ನಿಧಾನಗತಿ ಬೌಲಿಂಗ್ ಪ್ರಕರಣ ಇದಾಗಿದೆ. ಹೀಗಾಗಿ 12 ಲಕ್ಷ ದಂಡ ವಿಧಿಸಲಾಗಿದೆ. ಒಂದೊಮ್ಮೆ ಇದೇ ತಪ್ಪು ಮರುಕಳಿಸಿದರೆ ನಾಯಕನಿಗೆ 24 ಲಕ್ಷ ಮತ್ತು ತಂಡದ ಆಟಗಾರರರಿಗೂ ದಂಡ ವಿಧಿಸಲಾಗುತ್ತದೆ. ಐಪಿಎಲ್‌ನ ಕೋಡ್ ಆಫ್ ಕಂಡಕ್ಟ್ನ ಮೊದಲ ಅಪರಾಧವನ್ನು(ipl code of conduct level 1 offence) ವಾರ್ನರ್ ಒಪ್ಪಿಕೊಂಡಿದ್ದಾರೆ. ಇದನ್ನು ಉಲ್ಲಂಸಿದರೆ, ಪಂದ್ಯದ ರೆಫ್ರಿ ನಿರ್ಧಾರವು ಅಂತಿಮ ಮತ್ತು ಅದಕ್ಕೆ ಆಟಗಾರರು ಬದ್ಧರಾಗಿರಬೇಕಾಗಿದೆ ಎಂದು ಐಪಿಎಲ್ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ IPL 2023 : ಹಾಲಿ ಐಪಿಎಲ್ನಲ್ಲಿ ಮೊದಲ ಸಿಕ್ಸರ್ ಬಾರಿಸಿದ ಡೇವಿಡ್ ವಾರ್ನರ್!
ಡೆಲ್ಲಿಗೆ 7 ರನ್ ಗೆಲುವು
ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಸೋಮವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಪಾಲಿನ 20 ಓವರ್ಗಳಲ್ಲಿ 9 ವಿಕೆಟ್ ನಷ್ಟ ಮಾಡಿಕೊಂಡು 144 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಹೈದರಾಬಾದ್ ತಂಡ ತನ್ನ ಪಾಲಿನ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಬಾರಿಸಿ ಸೋಲೊಪ್ಪಿಕೊಂಡಿತು.