Site icon Vistara News

IPL 2023: ಪ್ರಭ್​ಸಿಮ್ರಾನ್​ ಸಿಂಗ್ ಚೊಚ್ಚಲ ಶತಕ; ಸ್ಪರ್ಧಾತ್ಮಕ ಮೊತ್ತ ಬಾರಿಸಿದ ಪಂಜಾಬ್​

Delhi Capitals vs Punjab Kings

ನವದೆಹಲಿ: ಸಂಕಷ್ಟದ ಸಮಯದಲ್ಲಿ ಯುವ ಆಟಗಾರ ಪ್ರಭ್​ಸಿಮ್ರಾನ್​ ಸಿಂಗ್(103) ಅವರು ಬಾರಿಸಿದ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಪಂಜಾಬ್​ ಕಿಂಗ್ಸ್​ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಡೆಲ್ಲಿ ಪರ ಇಶಾಂತ್​ ಶರ್ಮ 2 ವಿಕೆಟ್​ ಕಿತ್ತು ಮಿಂಚಿದರು. ಡೆಲ್ಲಿ ತಂಡ ಗೆಲುವಿಗೆ 168 ರನ್​ ಬಾರಿಸಬೇಕಿದೆ.

ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಪಂಜಾಬ್​ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 167 ರನ್​ ಗಳಿಸಿ ಸವಾಲೊಡ್ಡಿದೆ.

ಮಹತ್ವದ ಪಂದ್ಯದಲ್ಲಿ ಇನಿಂಗ್ಸ್​ ಆರಂಭಿಸಿದ ಪಂಜಾಬ್​ ತನ್ನ ಖ್ಯಾತಿಗೆ ತಕ್ಕಂತೆ ಆಟವಾಡುವಲ್ಲಿ ವಿಫಲವಾಯಿತು. ಬ್ಯಾಟಿಂಗ್​ ಮರೆತವರಂತೆ ಕ್ರೀಸ್​ಗಿಳಿದ ನಾಯಕ ಶಿಖರ್​ ಧವನ್​(7), ಜಿತೇಶ್​ ಶರ್ಮ(5) ಮತ್ತು ಲಿಯಾಮ್​ ಲಿವಿಂಗ್​ಸ್ಟೋನ್​(4) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ ಪರೇಡ್​ ನಡೆಸಿದರು.

ನಂಬುಗೆಯ ಬ್ಯಾಟರ್​ಗಳೆಲ್ಲ ಕೈ ಕೊಟ್ಟಾಗ ಟೊಂಕ ಕಟ್ಟಿ ನಿಂತ ಆರಂಭಿಕ ಆಟಗಾರ ಪ್ರಭ್​ಸಿಮ್ರಾನ್​ ಸಿಂಗ್ ಅವರು ಏಕಾಂಗಿಯಾಗಿ ಹೋರಾಟ ನಡೆಸಿದರು. ಡೆಲ್ಲಿ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಅವರು ಶತಕ ಬಾರಿಸಿ ಸಂಭ್ರಮಿಸಿದರು. ಜತೆಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಆದರೆ ಇವರಿಗೆ ಯಾವ ಆಟಗಾರನು ಉತ್ತಮ ಸಾಥ್​ ನೀಡಲೇ ಇಲ್ಲ. ಆಲ್​ರೌಂಡರ್​ ಸ್ಯಾಮ್​ ಕರನ್​ ಅವರು ಇನ್ನೇನು ತಂಡಕ್ಕೆ ಆಸರೆಯಾಗುತ್ತಾರೆ ಎನ್ನುವಷ್ಟರಲ್ಲಿ ಪ್ರವೀಣ್​ ದುಬೆ ಅವರು ಈ ವಿಕೆಟ್​ ಕಿತ್ತರು. ಕರನ್​ 20 ರನ್​ ಗಳಿಸಿದರು. ಬಳಿಕ ಬಂದ ಹರ್​ಪ್ರೀತ್​ ಬ್ರಾರ್ 5 ಎಸೆತ ಎದುರಿಸಿ ಕೇವಲ 2 ರನ್​ ಗಳಿಸಿದರು.

ಚೊಚ್ಚಲ ಶತಕ ಬಾರಿಸಿದ ಪ್ರಭ್​ಸಿಮ್ರಾನ್​

ಏಕಾಂಗಿಯಾಗಿ ಹೋರಾಟ ನಡೆಸಿದ ಪ್ರಭ್​ಸಿಮ್ರಾನ್​ ಸಿಂಗ್ ಅವರು ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸುವ ಮೂಲಕ ಐಪಿಎಲ್​ನಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಈ ಮೂಲಕ ಐಪಿಎಲ್​ ಕ್ರಿಕೆಟ್​ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿದ 6ನೇ ಬ್ಯಾಟರ್​ ಎನಿಸಿಕೊಂಡರು. ಮನೀಷ್​ ಪಾಂಡೆ ಅವರು 19 ವರ್ಷದಲ್ಲಿ ಆರ್​ಸಿಬಿ ಪರ ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಡೆಲ್ಲಿ ಬೌಲರ್​ಗಳಿಗೆ ಸಿಕ್ಸರ್​ ಮತ್ತು ಬೌಂಡರಿ ರುಚಿ ತೋರಿಸಿದ ಅವರು 65 ಎಸೆತಗಳಿಂದ 103 ರನ್​ ಬಾರಿಸಿ ಔಟಾದರು. ಅವರು ಒಟ್ಟು 6 ಸಿಕ್ಸರ್​ ಮತ್ತು 10 ಬೌಂಡರಿ ಬಾರಿಸಿದರು. ಒಂದೊಮ್ಮೆ ಇವರು ಆಡದೇ ಹೋಗುತ್ತಿದ್ದರೆ ತಂಡ 50 ರನ್​ ದಾಟುವುದು ಕೂಡ ಕಷ್ಟಸಾಧ್ಯ ಎನ್ನುವಂತಿತ್ತು. ತಂಡ ದಾಖಲಿಸಿದ ಬಹುಪಾಲು ಮೊತ್ತ ಇವರದ್ದೇ ಆಗಿತ್ತು.

ಇದನ್ನೂ ಓದಿ IPL 2023: ಹೈದರಾಬಾದ್​ ಕದನ ಗೆದ್ದ ಲಕ್ನೋ; ಪ್ಲೇ ಆಫ್​ ಆಸೆ ಜೀವಂತ

ದಾಖಲೆ ಬರೆದ ಇಶಾಂತ್​ ಶರ್ಮ

ಹಿರೀಯ ವೇಗಿ ಇಶಾಂತ್​ ಶರ್ಮ ಅವರು ಈ ಪಂದ್ಯದಲ್ಲಿ ವಿಶೇಷ ದಾಖಲೆಯೊಂದನ್ನು ಬರೆದರು. ಪಂಜಾಬ್​ ತಂಡದ ನಾಯಕ ಶಿಖರ್​ ಧವನ್​ ಅವರ ವಿಕೆಟ್​ ಕಿತ್ತು ಐಪಿಎಲ್​ ವೃತ್ತಿಜೀವನದಲ್ಲಿ ನೂರು ವಿಕೆಟ್​​ ಕಿತ್ತ ಸಾಧನೆ ಮಾಡಿದರು.

Exit mobile version