ಮೊಹಾಲಿ: ಗುರುವಾರ ನಡೆದ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೇಟನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ತಂಡದ ಸಹ ಮಾಲಕಿಯಾಗಿರುವ ಪ್ರೀತಿ ಜಿಂಟಾ ಅವರು ಕ್ರಿಕೆಟ್ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದು ಸಂಭ್ರಮಿಸಿದರು. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊಹಾಲಿಯ ಐ.ಎಸ್.ಬಿಂದ್ರಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿತು. ಜವಾಬಿತ್ತ ಗುಜರಾತ್ ಟೈಟನ್ಸ್ 19.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 154 ರನ್ ಬಾರಿಸಿ ಗೆಲುವು ದಾಖಲಿಸಿತು.
ಈ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಪಂಜಾಬ್ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ ಅವರು ತವರಿನ ಕ್ರಿಕೆಟ್ ಅಭಿಮಾನಿಗಳಿಗೆ ತಮ್ಮ ತಂಡದ ಕೆಲವು ಜೆರ್ಸಿಯನ್ನು ಉಚಿತವಾಗಿ ವಿತರಿಸಿದರು. ಇದೇ ವೇಳೆ ಅಭಿಮಾನಿಗಳೊಂದಿಗೆ ಅವರು ಸೆಲ್ಫಿಯನ್ನು ತೆಗೆದಿದ್ದಾರೆ. ಸಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಅವರು ಪಂದ್ಯದುದ್ದಕ್ಕೂ ತಮ್ಮ ತಂಡದ ಆಟಗಾರರಿಗೆ ಬೆಂಬಲ ಸೂಚಿಸುತ್ತಿರುವುದು ಕಂಡು ಬಂತು.
ಇದನ್ನೂ ಓದಿ IPL 2023: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಕೆಕೆಆರ್; ರಿಂಕು ಸಿಂಗ್ ಪಂದ್ಯದ ಪ್ರಧಾನ ಆಕರ್ಷಣೆ
ಸಣ್ಣ ಮೊತ್ತವನ್ನು ಬೆನ್ನಟ್ಟುವಲ್ಲಿ ಪರದಾಡಿದ ಗುಜರಾತ್ ಅಂತಿಮ ಓವರ್ನಲ್ಲಿ ಗೆಲುವಿಗೆ 7 ರನ್ ತೆಗೆಯುವ ಸವಾಲಿಗೆ ಬಂದು ನಿಂತಿತು. ಇದೇ ವೇಳೆ ಅರ್ಧಶತಕ ಬಾರಿಸಿದ್ದ ಶುಭಮನ್ ಗಿಲ್ ಕ್ಲೀನ್ ಬೌಲ್ಡ್ ಆದರು. ಮುಂದಿನ ಎಸೆತಗಳಲ್ಲಿ ಕೇವಲ ಒಂದೊಂದು ರನ್ ದಾಖಲಾಯಿತು. ಈ ವೇಳೆ ಪಂಜಾಬ್ ಮೇಲುಗೈ ಸಾಧಿಸುತ್ತದೆ ಎಂದು ಭಾವಿಸಲಾಗಿತ್ತು. ಡೇವಿಡ್ ಮಿಲ್ಲರ್ ಅವರು ಸ್ಟ್ರೈಕ್ನಲ್ಲಿದ್ದರೂ ಅವರಿಂದಲೂ ದೊಡ್ಡ ಹೊಡೆ ಬಾರಿಸಲು ಸಾಧ್ಯವಾಗಲಿಲ್ಲ. ಅಂತಿಮ ಎರಡು ಎಸೆತದ ಮುಂದೆ ನಾಲ್ಕು ರನ್ ಬೇಕಿದ್ದಾಗ ತೆವಾಟಿಯ ಬೌಂಡರಿ ಬಾರಿಸಿ ಗೆಲುವನ್ನು ಸಾರಿದರು. ಈ ಮೂಲಕ ಗುಜರಾತ್ ರೋಚಕ ಗೆಲುವು ದಾಖಲಿಸಿತು.