ಲಕ್ನೋ: ಆರ್ಸಿಬಿ ವಿರುದ್ಧದ ಗಲುವಿನ ಜೋಶ್ನಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಪಂಜಾಬ್ ವಿರುದ್ಧ ಶನಿವಾರ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲಿದೆ.
ಲಕ್ನೋಗೆ ಇದು ತವರಿನ ಪಂದ್ಯ. ಈ ಹಿಂದೆ ಡೆಲ್ಲಿ ವಿರುದ್ಧ ಇದೇ ಮೈದಾನದಲ್ಲಿ ಆಡಿದ ಪಂದ್ಯದಲ್ಲಿ ಕೈಲ್ ಮೇಯರ್ಸ್ಸ್ಫೋಟಕ ಬ್ಯಾಟಿಂಗ್ ನಡೆಸಿ ಮಿಂಚಿದ್ದರು. ಆದರೆ ಅವರು ಕಳೆದೆರಡು ಪಂದ್ಯಗಳಲ್ಲಿ ಅವರು ಉತ್ತಮವಾಗಿ ಬ್ಯಾಟಿಂಗ್ ನಡಸಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಅವರ ಬದಲು ಕ್ವಿಂಟನ್ ಡಿ ಕಾಕ್ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತ. ನಿಕೋಲಸ್ ಪೂರಣ್ ಮತ್ತು ಸ್ಟೋಯಿನಿಸ್ ಭರ್ಜರಿ ಬ್ಯಾಟಿಂಗ್ ಫಾರ್ಮ್ನಲ್ಲಿರುವುದು ತಂಡಕ್ಕೆ ಹೆಚ್ಚಿನ ಬಲ ಆದರೆ ನಾಯಕ ರಾಹುಲ್ ಮಾತ್ರ ಇದುವರೆಗೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾಗಿದ್ದಾರೆ. ಬೌಲಿಂಗ್ನಲ್ಲಿ ಮಾರ್ಕ್ ವುಡ್ ಒಂದು ಪಂದ್ಯದಲ್ಲಿ ಘಾತಕ ಸ್ಫೆಲ್ ನಡೆಸಿ ಆ ಬಳಿಕ ದುಬಾರಿಯಾಗುತ್ತಿದ್ದಾರೆ. ಜತೆಗೆ ಆವೇಶ್ ಖಾನ್ ಬೌಲಿಂಗ್ನಲ್ಲಿ ಯಾವುದೇ ಆವೇಶ ಕಾಣುತ್ತಿಲ್ಲ. ಅವರ ಓವರ್ನಲ್ಲಿ ವಿಪರೀತ ರನ್ ಸೋರಿಕೆಯಾಗುತ್ತಿದೆ.
ಲಕ್ನೋಗೆ ಹೋಲಿಸಿದರೆ ಪಂಜಾಬ್ ತಂಡದಲ್ಲಿ ಬಲಿಷ್ಠ ಬೌಲಿಂಗ್ ಪಡೆ ಇದೆ. ಅರ್ಶ್ದೀಪ್ ಸಿಂಗ್, ಸ್ಯಾಮ್ ಕರನ್, ಕಗೊಸೊ ರಬಾಡ ಹೀಗೆ ವಿಶ್ವ ದರ್ಜೆಯ ಬೌಲರ್ಗಳು ತಂಡದಲ್ಲಿದ್ದಾರೆ. ಆದರೆ ತಂಡಕ್ಕೆ ಹಿನ್ನಡೆಯಾಗುತ್ತಿರುವುದು ಬ್ಯಾಟಿಂಗ್ ವಿಭಾಗದಲ್ಲಿ. ಪ್ರತಿ ಪಂದ್ಯದಲ್ಲಿಯೂ ನಾಯಕ ಶಿಖರ್ ಧವನ್ ಮಾತ್ರ ಏಕಾಂಗಿ ಹೋರಾಟ ನಡೆಸಿ ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾಗುತ್ತಿದ್ದಾರೆ. ಇವರ ವಿಕೆಟ್ ಪತನಗೊಂಡರೆ ತಂಡ ನೂರರ ಗಡಿ ದಾಟಲು ಪರದಾಟಿದ ನಿದರ್ಶನವೂ ಇದೆ. ಹೀಗಾಗಿ ಈ ಪಂದ್ಯದಲ್ಲಿ ಎಲ್ಲ ಬ್ಯಾಟರ್ಗಳು ಕೂಡ ಜವಾಬ್ದಾರಿಯು ಆಟವಾಡುವುದು ಮುಖ್ಯವಾಗಿದೆ.
ಉಭಯ ತಂಡಗಳು ಇದುವರೆಗೆ ಒಂದು ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಲಕ್ನೋ ಮೇಲುಗೈ ಸಾಧಿಸಿತ್ತು. ಏಕನಾ ಕ್ರೀಡಾಂಗಣದ ಪಿಚ್ ವೇಗಿಗಳಿಗೆ ಹೆಚ್ಚು ನೆರವು ನೀಡುತ್ತದೆ. ಆದರೆ ಇಲ್ಲಿ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಇದೆ.
ಇದನ್ನೂ ಓದಿ IPL 2023: ಉಮ್ರಾನ್ ಮಲಿಕ್ ಓವರ್ನಲ್ಲಿ 28 ರನ್ ಬಾರಿಸಿದ ಕೆಕೆಆರ್ ನಾಯಕ; ವಿಡಿಯೊ ವೈರಲ್
ಸಂಭಾವ್ಯ ತಂಡ
ಪಂಜಾಬ್ ಕಿಂಗ್ಸ್: ಶಿಖರ್ ಧವನ್(ನಾಯಕ), ಪ್ರಭ್‌ಸಿಮ್ರನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಸ್ಯಾಮ್ ಕರ್ರನ್, ಶಾರೂಖ್ ಖಾನ್, ಹರ್ಪ್ರೀರ್ತ್ ಬ್ರಾರ್, ರಿಷಿ ಧವನ್, ಅರ್ಶ್ದೀಪ್ ಸಿಂಗ್, ಕಗಿಸೋ ರಬಾಡ.
ಲಕ್ನೋ ಸೂಪರ್ಜೈಂಟ್ಸ್: ಕ್ವಿಂಟನ್ ಡಿ ಕಾಕ್, ಕೆ.ಎಲ್ ರಾಹುಲ್(ನಾಯಕ), ಮಾರ್ಕಸ್ ಸ್ಟೋಯಿನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಕೆ.ಗೌತಮ್, ಆಯುಷ್ ಬದೋನಿ, ಆವೇಶ್ ಖಾನ್, ರವಿ ಬಿಷ್ಣೋಯ್, ಮಾರ್ಕ್ ವುಡ್.