ಗುವಾಹಟಿ: ಬುಧವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಆರ್.ಅಶ್ವಿನ್ ಅವರು ಮಂಕಡಿಂಗ್ ಮಾಡದೇ ಧವನ್ ಅವರಿಗೆ ಜೀವದಾನ ನೀಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುವಾಹಟಿಯ(Guwahati) ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ(Barsapara Cricket Stadium) ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಪಂಜಾಬ್ ಕಿಂಗ್ಸ್(Punjab Kings) ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 197 ರನ್ ಗಳಿಸಿತು. ಜವಾಬಿತ್ತ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 192 ರನ್ ಗಳಿಸಲಷ್ಟೇ ಶಕ್ತವಾಯಿತು. ಕೇವಲ 5 ರನ್ ಗಳ ಅಂತರದಿಂದ ಸೋಲು ಕಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ಗೆ ಆರಂಭಿಕರಾದ ಪ್ರಭಾಸಿಮ್ರಾನ್ ಸಿಂಗ್(Prabhsimran Singh) ಮತ್ತು ನಾಯಕ ಶಿಖರ್ ಧವನ್(Shikhar Dhawan) ಉತ್ತಮ ಆರಂಭ ಒದಗಿಸಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಯುವ ಆಟಗಾರ ಪ್ರಭಾಸಿಮ್ರಾನ್ ಸಿಂಗ್ ರಾಜಸ್ಥಾನ್ ಬೌಲರ್ಗಳಿಗೆ ಸತತ ಸಿಕ್ಸರ್ ಮತ್ತು ಬೌಂಡರಿಗಳ ರುಚಿ ತೋರಿಸಿದರು. ಇನ್ನೊಂದು ಬದಿಯಲ್ಲಿ ಶಿಖರ್ ಧವನ್ ನಿಧಾನಗತಿಯಲ್ಲಿ ಆಡುತ್ತಾ ಪ್ರಭಾಸಿಮ್ರಾನ್ ಸಿಂಗ್ ಉತ್ತಮ ಸಾಥ್ ನೀಡುತ್ತಿದ್ದರು. ಪವರ್ ಪ್ಲೇ ಮುಕ್ತಾಯಕ್ಕೆ ಈ ಜೋಡಿ 10ರ ಸರಾಸರಿಯಲ್ಲಿ ಬ್ಯಾಟ್ ಬೀಸಿ 63 ರನ್ ರಾಶಿ ಹಾಕಿತು.
ಇದನ್ನೂ ಓದಿ IPL 2023 : ಕೈಬೆರಳಿಗೆ ಗಾಯ, ಜೋಸ್ ಬಟ್ಲರ್ ಮುಂದಿನ ಪಂದ್ಯಕ್ಕೆ ಅಲಭ್ಯ?
ಈ ಸಂದರ್ಭದಲ್ಲಿ ಇನಿಂಗ್ಸ್‌ನ 7ನೇ ಓವರ್ ಎಸೆದ ಆರ್. ಅಶ್ವಿನ್ ಅವರು ಶಿಖರ್ ಧವನ್ ಅವರನ್ನು ಮಂಕಡಿಂಗ್ ಔಟ್ ಮಾಡದೆ ಎಚ್ಚರಿಕೆಯನ್ನಷ್ಟೇ ಕೊಟ್ಟು ಜೀವದಾನ ನೀಡಿದರು. ಐಸಿಸಿ ನಿಯಮದ ಪ್ರಕಾರ ಬೌಲರ್ಗಳು ಚೆಂಡನ್ನು ಎಸೆಯುವ ಮುನ್ನ ನಾನ್ಸ್ಟ್ರೈಕ್ನಲ್ಲಿರುವ ಬ್ಯಾಟರ್ ಕ್ರೀಸ್ ಬಿಟ್ಟರೆ ಅವರನ್ನು ರನೌಟ್ ಮಾಡಬಹುದಾಗಿದೆ. ಆದರೆ ಅಶ್ವಿನ್ ಅವರು ಈ ರೀತಿ ಮಾಡದೆ ಧವನ್ಗೆ ಜೀವದಾನ ನೀಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೊ ಕಂಡ ಕೆಲ ನೆಟ್ಟಿಗರು ಅಶ್ವಿನ್ ಅವರನ್ನು ಟ್ರೋಲ್ ಮಾಡಿದ್ದಾರೆ. ಒಂದೊಮ್ಮೆ ಬಟ್ಲರ್ ಕ್ರೀಸ್ನಲ್ಲಿದ್ದರೆ ಮಂಕಡಿಂಗ್ ಮಾಡುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದರೆ. ಅಶ್ವಿನ್ ಅವರು ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದ ವೇಳೆ ಬಟ್ಲರ್ ಅವರನ್ನು ಮಂಕಡಿಂಗ್ ಮೂಲಕ ಔಟ್ ಮಾಡಿ ಭಾರಿ ಸುದ್ದಿಯಾಗಿದ್ದರು. ಇದು ಕ್ರೀಡಾ ಸ್ಫೂರ್ತಿಗೆ ವಿರುದ್ದ ಎಂದು ಕೆಲವರು ಅಶ್ವಿನ್ ಅವರನ್ನು ಟೀಕಿಸಿದ್ದರು. ಇದೀಗ ಅಶ್ವಿನ್ ಅವರು ಈ ನಿಯಮ ಜಾರಿಯಲ್ಲಿದ್ದರೂ ಮಂಕಡಿಂಗ್ ಮಾಡದೆ ಇರುವುದು ಅಚ್ಚರಿ ತಂದಿದೆ.
ಅಶ್ವಿನ್ ಅವರಿಂದ ನೀಡಿದ ಜೀವದಾನ ಪಡೆದ ಧವನ್ 56 ಎಸೆತಗಳಿಂದ 86 ರನ್ ಬಾರಿಸಿ ಅಜೇಯರಾಗಿ ಉಳಿದರು. ಧವನ್ ಅವರ ಈ ಮನಮೋಹಕ ಇನಿಂಗ್ಸ್ನಲ್ಲಿ 9 ಬೌಂಡರಿ ಮತ್ತು ಮೂರು ಸಿಕ್ಸರ್ ದಾಖಲಾಯಿತು. ಒಂದೊಮ್ಮೆ ಧವನ್ ಅವರನ್ನು ಅಶ್ವಿನ್ ಔಟ್ ಮಾಡುತ್ತಿದ್ದರೆ ರಾಜಸ್ಥಾನ್ ಈ ಪಂದ್ಯದಲ್ಲಿ ಗೆಲುವು ದಾಖಲಿಸುತ್ತಿತ್ತು.