ಚೆನ್ನೈ: ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್(IPL 2023) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಆರ್.ಅಶ್ವಿನ್ ಅವರಿಗೆ ಪಂದ್ಯ ಶುಲ್ಕದ ಶೇ.25ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.7 ಅನ್ನು ಉಲ್ಲಂಗಿಸಿದ್ದಕ್ಕಾಗಿ ಅಶ್ವಿನ್ ಅವರಿಗೆ ಈ ದಂಡ ವಿಧಿಸಲಾಯಿತು.
ಆರ್ಟಿಕಲ್ 2.7ರ ಅಡಿ ಹಂತ 1ರ ಅಪರಾಧವನ್ನು ಅಶ್ವಿನ್ ಒಪ್ಪಿಕೊಂಡಿದ್ದಾರೆ. ಇದನ್ನು ಉಲ್ಲಂಸಿದರೆ, ಪಂದ್ಯದ ರೆಫ್ರಿ ನಿರ್ಧಾರವು ಅಂತಿಮ ಮತ್ತು ಅದಕ್ಕೆ ಆಟಗಾರರು ಬದ್ಧರಾಗಿರಬೇಕಾಗಿದೆ ಎಂದು ಐಪಿಎಲ್ ಮಂಡಳಿ ತಿಳಿಸಿದೆ. ಒಂದೊಮ್ಮೆ ಅಂಪೈರ್ಗೆ ಒಂದು ಪಂದ್ಯ ನಿಷೇಧಿಸುವ ಅವಕಾಶವೂ ಇರುತ್ತದೆ. ಸದ್ಯ ಅಶ್ವಿನ್ ಈ ಶಿಕ್ಷೆಗೆ ಗುರಿಯಾಗಿಲ್ಲ.
ಚೆನ್ನೈಯ ಚೆಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಜಸ್ಥಾನ್ ನಿಗದಿತ 20 ಓವರ್ಗಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತನ್ನ ಪಾಲಿನ ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಬಾರಿಸಿ ಕೇವಲ ಮೂರು ರನ್ ಅಂತರದಿಂದ ಸೋಲು ಕಂಡಿತು.
ಅಂಪೈರ್ಗಳ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದ ಅಶ್ವಿನ್
ಈ ಪಂದ್ಯದಲ್ಲಿ ಅಂಪೈರ್ಗಳ ನಿರ್ಧಾರಕ್ಕೆ ಆರ್. ಅಶ್ವಿನ್ ಅವರು ಬೇಸರ ವ್ಯಕ್ತಪಡಿಸಿದ್ದರು. ಜತೆಗೆ ಈ ಬಾರಿಯ ಐಪಿಎಲ್(IPL 2023) ಟೂರ್ನಿಯಲ್ಲಿ ಚಾಲ್ತಿಗೆ ತಂದ ಕೆಲ ನೂತನ ನಿಯದ ಬಗ್ಗೆಯೂ ಅವರು ಅಸಮಾಧಾನ ಹೊರಹಾಕಿದ್ದರು.
ಇದನ್ನೂ ಓದಿ IPL 2023: ಬೌಲಿಂಗ್ನಲ್ಲಿ ನೂತನ ದಾಖಲೆ ಬರೆದ ಪಂಜಾಬ್ ತಂಡದ ವೇಗಿ ಕಗಿಸೊ ರಬಾಡ
“ಚೆನ್ನೈ ತಂಡ ಚೇಸಿಂಗ್ ನಡೆಸುವ ವೇಳೆ ಇಬ್ಬನಿಯ ಕಾರಣದಿಂದ ಅಂಪೈರ್ಗಳು ಏಕಾಏಕಿ ಚೆಂಡನ್ನು ಬದಲಾಯಿಸಿದರು. ಈ ರೀತಿ ಅಂಪೈರ್ಗಳು ತಾವಾಗಿಯೇ ಚೆಂಡನ್ನು ಬದಲಾಯಿಸುವುದನ್ನು ಹಿಂದೆಂದೂ ನಾನು ಕ್ರಿಕೆಟ್ನಲ್ಲಿ ನೋಡಿರಲಿಲ್ಲ ಮತ್ತು ಕೇಳಿರಲಿಲ್ಲ ಇದು ಆಶ್ಚರ್ಯವಾಗಿದೆ” ಎಂದು ಅಶ್ವಿನ್ ಹೇಳಿದ್ದರು.
“ಬೌಲಿಂಗ್ ತಂಡವಾಗಿ ನಾವೇ ಚೆಂಡನ್ನು ಬದಲಾಯಿಸಲು ಕೇಳಿಲ್ಲ. ಹೀಗಿರುವಾಗ ಅಂಪೈರ್ಗಳು ಚೆಂಡನ್ನು ಹೇಗೆ ಬದಲಾಯಿಸಿದರು. ನಿಜಕ್ಕೂ ಈ ಬಾರಿಯ ಟೂರ್ನಿಯಲ್ಲಿ ಅಂಪೈರ್ಗಳ ಕೆಲ ನಿರ್ಧಾರಗಳು ಅತ್ಯಂತ ಕಳಪೆ ಮಟ್ಟದಿಂದ ಕೂಡಿದೆ. ಇನ್ನು ಕೆಲ ಹೊಸ ನಿಯಮದಿಂದ ನೈಜ ಕ್ರಿಕೆಟ್ನ ಸ್ವರೂಪ ಬದಲಾಗುತ್ತಿದೆ” ಎಂದು ಅಶ್ವಿನ್ ಬೇಸರ ವ್ಯಕ್ತಪಡಿಸಿದ್ದರು.
ರಹಾನೆ ಜತೆ ಕಿರಿಕ್
ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಳಿದ ಅಜಿಂಕ್ಯ ರಹಾನೆ 19 ಎಸೆತಗಳಲ್ಲಿ 31 ರನ್ ಬಾರಿಸಿದ್ದರು. ಈ ನಡುವೆ ಅವರು ಹಿರಿಯ ಬೌಲರ್ ಆರ್ ಅಶ್ವಿನ್ ಅವರೊಂದಿಗೆ ಮೈದಾನದಲ್ಲೇ ಜಟಾಪಟಿ ನಡೆಸಿದ್ದರು. ಪವರ್ ಪ್ಲೇ ಅವಧಿಯ ಕೊನೇ ಓವರ್ (6ನೇ ಓವರ್) ಎಸೆದಿದ್ದು ಆರ್. ಅಶ್ವಿನ್. ಈ ಓವರ್ನಲ್ಲಿ ಆರ್. ಅಶ್ವಿನ್ ಚೆಂಡೆಸೆಯಲು ಮುಂದೆ ಬಂದಾಗ ಅಜಿಂಕ್ಯ ರಹಾನೆ ಒಂದು ಹೆಜ್ಜೆ ಮುಂದೆ ಇಟ್ಟರು. ತಕ್ಷಣ ಅಶ್ವಿನ್ ಚೆಂಡೆಸೆಯದೇ ಸುಮ್ಮನೆ ನಿಂತರು. ಇದರಿಂದ ಅಜಿಂಕ್ಯ ರಹಾನೆಗೆ ನಿರಾಸೆ ಎದುರಾಯಿತು. ಪ್ರತಿಕಾರವಾಗಿ ಅಶ್ವಿನ್ ಮುಂದಿನ ಎಸೆತ ಎಸೆಯುವ ವೇಳೆ ಅಜಿಂಕ್ಯ ರಹಾನೆ ಹಿಂದಕ್ಕೆ ಸರಿದರು. ಇವರಿಬ್ಬರ ಈ ಜಟಾಪಟಿ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿತ್ತು.