ಅಹಮದಾಬಾದ್: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2023) ಟೂರ್ನಿಗೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಈ ಮಹತ್ವದ ಕ್ರಿಕೆಟ್ ಜಾತ್ರೆಗೆ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಸಕಲ ಸಿದ್ಧತೆಯನ್ನು ಪೂರ್ಣಗೊಳಿಸಿದೆ. ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ(Rashmika Mandanna) ನೃತ್ಯದ ಮೂಲಕ ಎಲ್ಲರನ್ನು ರಂಜಿಸಲಿದ್ದಾರೆ ಎಂದು ವರದಿಯಾಗಿದೆ.
ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಉದ್ಘಾಟನಾ ಸಮಾರಂಭ ಇದೀಗ ಬರೋಬ್ಬರಿ 4 ವರ್ಷಗಳ ಬಳಿಕ ನಡೆಯುತ್ತಿದೆ. ಈ ಉದ್ಘಾಟನಾ ಸಮಾರಂಭ ಭಾರತದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾರ್ಚ್ 31 ರಂದು ನಡೆಯಲಿದೆ. ಇದರಲ್ಲಿ ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯ(Tamannaah Bhatia) ನೃತ್ಯ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಮತ್ತು ಎಂ.ಎಸ್. ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಎಲ್ಲ ತಂಡಗಳು ಅಭ್ಯಾಸ ಆರಂಭಿಸಿದೆ.
ಇದನ್ನೂ ಓದಿ IPL 2023: ಐಪಿಎಲ್ನಲ್ಲಿ ನೂತನ ನಿಯಮ ಜಾರಿ; ಏನದು?
ಹೊಸ ನಿಯಮ
ಈ ಬಾರಿಯ ಐಪಿಎಲ್ನಲ್ಲಿ ನೂತನ ನಿಯಮೊಂದನ್ನು ಜಾರಿಗೆ ತರಲು ಐಪಿಎಲ್ ಆಡಳಿತ ಮಂಡಳಿ ಮುಂದಾಗಿದೆ. ಸಾಮಾನ್ಯವಾಗಿ ಟಾಸ್ಗೂ ಮುನ್ನ ಅಂತಿಮ 11ರ ಆಡುವ ಬಳಗವನ್ನು ತಂಡಗಳು ಪ್ರಕಟಿಸಬೇಕಿತ್ತು. ಆದರೆ ಇದೀಗ ಟಾಸ್ ನಂತರವೂ ತಂಡವನ್ನು ಪ್ರಕಟಿಸುವ ಅವಕಾಶ ನೀಡಲಾಗಿದೆ. ಪರಿಸ್ಥಿತಿ ಹಾಗೂ ಪಿಚ್ಗೆ ತಕ್ಕಂತೆ ಆಟಗಾರರನ್ನು ಆಯ್ಕೆ ಮಾಡಿ ಅತ್ಯುತ್ತಮ ತಂಡವನ್ನು ಕಣಕ್ಕಿಳಿಸುವ ಅವಕಾಶ ತಂಡಗಳಿಗೆ ದೊರೆಯುತ್ತದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿರುವುದಾಗಿ ಕ್ರಿಕ್ಇನ್ಫೋ ವರದಿ ಮಾಡಿದೆ. ಜತೆಗೆ ಈ ನಿಯಮ ಬದಲಾವಣೆ ವಿಚಾರವನ್ನು ಈಗಾಗಲೇ ಎಲ್ಲ ಫ್ರಾಂಚೈಸಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದೆ.