ಬೆಂಗಳೂರು: ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಒಂದು ವಿಕೆಟ್ ಅಂತರದಿಂದ ಸೋಲು ಕಂಡಿತು. ಇದೇ ಖುಷಿಯಲ್ಲಿ ಲಕ್ನೋ ತಂಡ ಚಿನ್ನಸ್ವಾಮಿ ಮೈದಾನದಲ್ಲಿ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಆದರೆ ಆರ್‌ಸಿಬಿ ಅಭಿಮಾನಿಗಳು ಆರ್‌ಸಿಬಿ…ಆರ್‌ಸಿಬಿ ಎಂದು ಜೋರಾಗಿ ಕೂಗುವ ಮೂಲಕ ಸಂಭ್ರಮಾಚರಣೆಗೆ ಅಡ್ಡಿ ಪಡಿಸುತ್ತಿದ್ದರು. ಇದೇ ವೇಳೆ ಕೋಪಗೊಂಡ ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಅವರು ಸಿಟ್ಟಿಗೆದ್ದು ಅಭಿಮಾನಿಗಳಿಗೆ ಸುಮ್ಮನಿರುವಂತೆ ಕೈ ಸನ್ನೆ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪಂದ್ಯವನ್ನು ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಮಧ್ಯೆಯ ಸೇಡಿನ ಪಂದ್ಯವೆಂದೇ ಬಿಂಬಿಸಲಾಗಿತ್ತು. ಇದಕ್ಕೆ ಕಾರಣ ಈ ಹಿಂದೆ ಗಂಭಿರ್ ಮತ್ತು ಕೊಹ್ಲಿ ಮೈದಾನದಲ್ಲಿಯೇ ಮಾತಿನ ಚಕಮಕಿ ನಡೆಸಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಇದೇ ಕಾರಣಕ್ಕೆ ಆರ್‌ಸಿಬಿ ವಿರುದ್ಧದ ಪಂದ್ಯವನ್ನು ಗೆದ್ದ ಖುಷಿಯಲಿದ್ದ ಗಂಭೀರ್ ಮೈದಾನಕ್ಕೆ ಬಂದು ಆಟಗಾರರೊಂದಿಗೆ ಸಂಭ್ರಮಿಸಿದ್ದಾರೆ. ಆದರೆ ಆರ್‌ಸಿಬಿ ಅಭುಮಾನಿಗಳು ಪಂದ್ಯ ಸೋತರೂ ತಮ್ಮ ತಂಡಕ್ಕೆ ಬೆಂಬಲ ಸೂಚಿಸುತ್ತಿದ್ದರು. ಇದರಿಂದ ಕರೆಳಿದ ಗಂಭೀರ್ ಕೋಪದಲ್ಲಿ ಅಭಿಮಾನಿಗಳತ್ತ ತಿರುಗಿ ಬಾಯಿ ಮುಚ್ಚಲು ಸನ್ನೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ IPL 2023: ಮಂಕಡಿಂಗ್ ಪ್ರಯತ್ನದ ಬಗ್ಗೆ ಬೆನ್ ಸ್ಟೋಕ್ಸ್ ಹೇಳಿದ್ದೇನು?
ಗಂಭೀರ್ ಅವರ ಈ ವರ್ತನೆಗೆ ಆರ್‌ಸಿಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ಬಾರಿ ತವರಿನಲ್ಲಿಯೇ ನಿಮಗೆ ಸೋಲುಣಿಸುವುದು ಪಕ್ಕಾ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನೀವು ಹಿರಿಯ ಕ್ರಿಕೆಟಿಗರಾಗಿ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ರೋಚಕ ಗೆಲುವು ಸಾಧಿಸಿದ ಲಕ್ನೋ
ಆರ್ಸಿಬಿಯ 212 ರನ್ಗಳನ್ನು ಬೆನ್ನಟ್ಟಿದ ಲಕ್ನೋಗೆ ಕೊನೆಯ 6 ಎಸೆತದಲ್ಲಿ ಗೆಲ್ಲಲು 5 ರನ್ ತೆಗೆಯುವ ಸವಾಲು ಎದುರಾಯಿತು. ಮೊದಲ ಎಸೆತದಲ್ಲಿ ಉನಾದ್ಕತ್ 1 ರನ್ ಗಳಿಸಿದರು. 2ನೇ ಎಸೆತದಲ್ಲಿ ವುಡ್ ಬೌಲ್ಡ್ ಆದರು. 3ನೇ ಎಸೆತದಲ್ಲಿ ರವಿ ಬಿಷ್ಣೋಯಿ 2 ರನ್ ಕದ್ದರು. 4ನೇ ಎಸೆತದಲ್ಲಿ 1 ರನ್ ಪಡೆದ ಬಿಷ್ಣೋಯಿ ಸ್ಕೋರ್ ಸಮಗೊಳ್ಳುವಂತೆ ಮಾಡಿದರು. 5ನೇ ಎಸೆತದಲ್ಲಿ ಉನಾದ್ಕತ್ ಅವರು ಡು ಪ್ಲೆಸಿಸ್ಗೆ ಕ್ಯಾಚ್ ನೀಡಿ ಔಟಾದರು. ಅಂತಿಮ ಎಸೆತವನ್ನು ಬೌಲ್ ಮಾಡುವಾಗ ಹರ್ಷಲ್ ಮೊದಲು ಮಂಕಡಿಂಗ್ ಯತ್ನದಲ್ಲಿ ಎಡವಿದರು. ಆದರೆ ಮುಂದಿನ ಎಸೆತವನ್ನು ಡಾಟ್ ಮಾಡಿದರು ಬೈಸ್ ಮೂಲಕ ಒಂದು ರನ್ ಕದ್ದ ಲಕ್ನೋ ಒಂದು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿತು.