ಬೆಂಗಳೂರು: ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ 24 ರನ್ಗಳಿಂದ ಗೆದ್ದು ಬೀಗಿದ್ದ ಆರ್ಸಿಬಿ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಭಾನುವಾರ ನಡೆಯುವ ಐಪಿಎಲ್ನ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ತಂಡವನ್ನು ಎದುರಿಸಲಿದೆ. ಆರ್ಸಿಬಿಗೆ ಇದು ತವರು ಪಂದ್ಯವಾಗಿದೆ. ಈ ಪಂದ್ಯದಲ್ಲಿ ಆರ್ಸಿಬಿ ಹಸಿರು ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
ಪ್ರತಿ ಬಾರಿಯಂತೆ ಈ ಬಾರಿಯೂ ಗೋ ಗ್ರೀನ್ ಅಭಿಯಾನಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಆರ್ಸಿಬಿ ಈ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಆಡಲಿದೆ. “ನಮ್ಮ ವಿಶೇಷ ಹಸಿರು ಜೆರ್ಸಿಗಳು ಶೇ.100ರಷ್ಟು ಮರುಬಳಕೆಯ ವಸ್ತುಗಳಿಂದ ಮಾಡಲ್ಪಟ್ಟಿದೆ. ಪರಿಸರ ಸಂರಕ್ಷಣೆಯ ಜಾಗೃತಿಗಾಗಿ ಈ ಬಾರಿ ಹಲವು ಯೋಜನೆಯನ್ನು ರೂಪಿಸಿದ್ದೇವೆ. ನಿಮ್ಮ ಬೆಂಬಲವು ಇದಕ್ಕೆ ಮುಖ್ಯ’ ಎಂದು ಆರ್ಸಿಬಿ ಟ್ವಿಟರ್ನಲ್ಲಿ ಹೇಳಿದೆ.
2011 ರಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್ಸಿಬಿ ತಮ್ಮ ‘ಗೋ ಗ್ರೀನ್’ ಅಭಿಯಾನದಲ್ಲಿ ತೊಡಗಿಕೊಂಡಿತ್ತು. ಇದೇ ಕಾರಣಕ್ಕೆ ಪ್ರತಿ ಆವೃತ್ತಿಯಲ್ಲಿಯೂ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುತ್ತಿದೆ. ಆದರೆ 2021ರಲ್ಲಿ, ಹಸಿರು ಜರ್ಸಿಯಲ್ಲಿ ಆಡುವ ಬದಲು ತಂಡವು ಒಂದು ಪಂದ್ಯದಲ್ಲಿ ನೀಲಿ ಜರ್ಸಿಯಲ್ಲಿ ಆಡಿತ್ತು. ಇದಕ್ಕೆ ಕಾರಣ ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿರುವ ಕಾರ್ಮಿಕರಿಗೆ ಅವರ ತ್ಯಾಗ ಮತ್ತು ಕಠಿಣ ಪರಿಶ್ರಮಕ್ಕೆ ಗೌರವ ಸಲ್ಲಿಸಲು ಈ ನೀಲಿ ಜೆರ್ಸಿ ಧರಿಸಿ ಆಡಿತ್ತು.
ಇದನ್ನೂ ಓದಿ IPL 2023: ಪಂಜಾಬ್ ಬ್ಯಾಟಿಂಗ್ ಆರ್ಭಟಕ್ಕೆ ಬೆಚ್ಚಿಬಿದ್ದ ಮುಂಬೈ; ಗೆಲುವಿಗೆ 215 ರನ್ ಗುರಿ
ಆರ್ಸಿಬಿ ಈ ಜೆರ್ಸಿಯಲ್ಲಿ ಕಣಕ್ಕಿಳಿದ ಬಹುತೇಕ ಪಂದ್ಯದಲ್ಲಿ ಸೋಲು ಕಂಡಿದೆ. ಆರ್ಸಿಬಿ ಐಪಿಎಲ್‌ನಲ್ಲಿ ಹಸಿರು ಜೆರ್ಸಿಯಲ್ಲಿ ಇದುವರೆಗೆ ಒಟ್ಟು 11 ಪಂದ್ಯಗಳನ್ನು ಆಡಿದೆ. ಈ ಹನ್ನೊಂದು ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಇನ್ನುಳಿದ 7 ಪಂದ್ಯಗಳಲ್ಲಿ ಸೋಲನುಭವಿಸಿದೆ. ಹೀಗಾಗಿ ಪಂದ್ಯ ಆರಂಭಕ್ಕೂ ಮುನ್ನವೇ ಅಭಿಮಾನಿಗಳು ಈ ಜೆರ್ಸಿ ತಂಡಕ್ಕೆ ಅದೃಷ್ಟವಿಲ್ಲ ಎಂದು ಹೇಳಲಾರಂಭಿಸಿದ್ದಾರೆ.