ಮೊಹಾಲಿ: ಕಳೆದ 15 ವರ್ಷಗಳಿಂದ ಈ ಸಲ ಕಪ್ ನಮ್ದೇ ಎಂದು ಹೇಳುತ್ತಲೇ ಬರುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅದೃಷ್ಟ ಈ ಸಲವೂ ನೆಟ್ಟಗಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಆಡಿರುವ 5 ಪಂದ್ಯಗಳಲ್ಲಿ ಮೂರರಲ್ಲಿ ಸೋಲು ಕಂಡಿದೆ. ವಿಪರ್ಯಾಸವೆಂದರೆ ಆರ್ಸಿಬಿ ತವರಿನಲ್ಲಿಯೇ ಹೆಚ್ಚು ಸೋಲು ಕಂಡಿದೆ. ಇದೀಗ ತನ್ನ ಆರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ.
ಗುರುವಾರದ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಆರ್ಸಿಬಿ ತವರಿನಾಚೆ ಇದುವರೆಗೆ ಒಂದು ಪಂದ್ಯ ಆಡಿದೆ. ಅದರಲ್ಲಿ ಸೋಲು ಕಂಡಿದೆ. ಹೀಗಾಗಿ ಆರ್ಸಿಬಿ ಮೇಲೆ ಹೆಚ್ಚಿನ ನಿರೀಕ್ಷೆ ಇಡುವುದು ಕಷ್ಟ. ಅದರಲ್ಲೂ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ವಿಕೆಟ್ ಬೇಗನೆ ಬಿದ್ದರೆ ಎದುರಾಳಿ ತಂಡ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ಆ ಬಳಿಕ ಕ್ರೀಸ್ಗಿಳಿಯುವ ಯಾವುದೇ ಆಟಗಾರನು ತಂಡಕ್ಕೆ ಆಸರೆಯಾಗುತ್ತಿಲ್ಲ. ಇನ್ನೊಂದಡೆ ಸಿರಾಜ್ ಹೊರತುಪಡಿಸಿ ಉಳಿದ ಬೌಲರ್ಗಳು ದುಬಾರಿಯಾಗುತ್ತಿದ್ದಾರೆ. ಒಟ್ಟಾರೆ ತಂಡದ ಭವಿಷ್ಯ ಕೇವಲ 4 ಮಂದಿ ಆಟಗಾರರ ಪ್ರದರ್ಶನದ ಮೇಲೆ ನಿಂತಿದೆ.
ಪಂಜಾಬ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ವೈವಿಧ್ಯಮಯವಾಗಿದೆ. ನಾಯಕ ಶಿಖರ್ ಧವನ್ ಅವರ ಅನುಪಸ್ಥಿತಿಯಲ್ಲಿಯೂ ಕಳೆದ ಪಂದ್ಯದಲ್ಲಿ ಗೆದ್ದು ಬೀಗಿತ್ತು. ಈ ತಂಡ ಯಾವುದೇ ಆಟಗಾರ ಪ್ರದರ್ಶನವನ್ನು ನಂಬಿ ಕುಳಿತಿಲ್ಲ. ಎಲ್ಲ ಆಟಗಾರರು ಯಾವುದೇ ಕ್ಷಣದಲ್ಲಾದರೂ ತಂಡಕ್ಕೆ ಆಸರೆಯಾಗಬಲ್ಲರು. ಬೌಲಿಂಗ್ ವಿಚಾರದಲ್ಲಿ ಆರ್ಸಿಬಿಗಿಂತ ಪಂಜಾಬ್ ಬಲಿಷ್ಠವಾಗಿದೆ. ಹೆಚ್ಚಾಗಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವುಳ್ಳವರೇ ಇಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಶ್ದಿಪ್ ಸಿಂಗ್, ಕಗಿಸೊ ರಬಾಡ, ಸ್ಯಾಮ್ ಕರನ್ ಇಲ್ಲಿನ ಪ್ರಮುಖರು.
ಇದನ್ನೂ ಓದಿ IPL 2023: ಅಗ್ರಸ್ಥಾನಿ ರಾಜಸ್ಥಾನ್ಗೆ ಸೋಲು; ಐಪಿಎಲ್ ಅಂಕ ಪಟ್ಟಿ ಹೇಗಿದೆ?
ಇನ್ನು ಈ ಪಂದ್ಯದಲ್ಲಿ ಹಾರ್ಡ್ ಹಿಟ್ಟರ್ ಲಿಯಾಮ್ ಲಿವಿಂಗ್ಸ್ಟೋನ್ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಅವರ ಆಗಮನದಿಂದ ಪಂಜಾಬ್ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಆದರೆ ಭುಜದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶಿಖರ್ ಧವನ್ ಅವರು ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ಸ್ಯಾಮ್ ಕರನ್ ಅವರೇ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
ಬಲಾಬಲ ಹೇಗಿದೆ?
ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಇದುವರೆಗೆ ಐಪಿಎಲ್ನಲ್ಲಿ ಒಟ್ಟು 30 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್ಸಿಬಿ 13 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ತಂಡ 17 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಪಂಜಾಬ್ ಮುಂದಿದೆ. ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿ ತಂಡ ಪಂಜಾಬ್ ವಿರುದ್ಧ ಮಾತ್ರವೇ ಇಷ್ಟು ಸಂಖ್ಯೆಯ ಸೋಲು ಕಂಡಿದೆ. ಇನ್ನು ಕಳೆದ ಆವೃತ್ತಿಯಲ್ಲಿ ಇತ್ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ ಎರಡೂ ಪಂದ್ಯಗಳಲ್ಲಿಯೂ ಪಂಜಾಬ್ ಕಿಂಗ್ಸ್ ಗೆದ್ದು ಬೀಗಿತ್ತು.