ಬೆಂಗಳೂರು: ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ತಂಡದ ಪ್ರತಿ ಬಾರಿಯಂತೆ ಈ ಬಾರಿಯೂ ಗೋ ಗ್ರೀನ್ ಅಭಿಯಾನಕ್ಕೆ ಬೆಂಬಲ ಸೂಚಿಸಲಿದೆ. ಇದೇ ಕಾರಣಕ್ಕೆ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಏಪ್ರಿಲ್ 23 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಆಡಲಿದೆ ಎಂದು ಫ್ರಾಂಚೈಸಿ ಟ್ವಿಟರ್ನಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದೆ.
“ನಮ್ಮ ವಿಶೇಷ ಹಸಿರು ಜೆರ್ಸಿಗಳು ಶೇ.100ರಷ್ಟು ಮರುಬಳಕೆಯ ವಸ್ತುಗಳಿಂದ ಮಾಡಲ್ಪಟ್ಟಿದೆ. ಪರಿಸರ ಸಂರಕ್ಷಣೆಯ ಜಾಗೃತಿಗಾಗಿ ಈ ಬಾರಿ ಹಲವು ಯೋಜನೆಯನ್ನು ರೂಪಿಸಿದ್ದೇವೆ. ನಿಮ್ಮ ಬೆಂಬಲವು ಇದಕ್ಕೆ ಮುಖ್ಯ’ ಎಂದು ಆರ್ಸಿಬಿ ಟ್ವಿಟರ್ನಲ್ಲಿ ಹೇಳಿದೆ. ಜತೆಗೆ ಈ ಜೆರ್ಸಿಯನ್ನು ಪಡೆಯಲು ಇಚ್ಚಿಸುವವರು ಆರ್ಸಿಬಿ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ನಲ್ಲಿ ಆರ್ಡರ್ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.
ಇದನ್ನೂ ಓದಿ IPL 2023: ಗುಜರಾತ್ ಬೌಲಿಂಗ್ ದಾಳಿಗೆ ಪರದಾಡಿದ ಪಂಜಾಬ್
2011 ರಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್ಸಿಬಿ ತಮ್ಮ ‘ಗೋ ಗ್ರೀನ್’ ಅಭಿಯಾನದಲ್ಲಿ ತೊಡಗಿಕೊಂಡಿತ್ತು. ಇದೇ ಕಾರಣಕ್ಕೆ ಪ್ರತಿ ಆವೃತ್ತಿಯಲ್ಲಿಯೂ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುತ್ತಿದೆ. ಆದರೆ 2021ರಲ್ಲಿ, ಹಸಿರು ಜರ್ಸಿಯಲ್ಲಿ ಆಡುವ ಬದಲು ತಂಡವು ಒಂದು ಪಂದ್ಯದಲ್ಲಿ ನೀಲಿ ಜರ್ಸಿಯಲ್ಲಿ ಆಡಿತ್ತು. ಇದಕ್ಕೆ ಕಾರಣ ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿರುವ ಕಾರ್ಮಿಕರಿಗೆ ಅವರ ತ್ಯಾಗ ಮತ್ತು ಕಠಿಣ ಪರಿಶ್ರಮಕ್ಕೆ ಗೌರವ ಸಲ್ಲಿಸಲು ಈ ನೀಲಿ ಜೆರ್ಸಿ ಧರಿಸಿ ಆಡಿತ್ತು.
ಈ ಬಾರಿ ಮತ್ತೆ ಹಸಿರು ಜೆರ್ಸಿಯಲ್ಲಿ ಆಡಲಿದೆ. ಇನ್ನೊಂದು ವಿಚಾರವೆಂದರೆ ಆರ್ಸಿಬಿ ಈ ಜೆರ್ಸಿಯಲ್ಲಿ ಕಣಕ್ಕಿಳಿದ ಬಹುತೇಕ ಪಂದ್ಯದಲ್ಲಿ ಸೋಲು ಕಂಡಿದೆ. ಹೀಗಾಗಿ ಈ ಜೆರ್ಸಿ ತಂಡಕ್ಕೆ ಅದೃಷ್ಟವಿಲ್ಲ ಎನ್ನುವುದು ಅಭಿಮಾನಿಗಳ ಆಶಯ ಆದರೆ ಈ ಬಾರಿ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಈ ಪಂದ್ಯಕ್ಕೂ ಮುನ್ನ ಆರ್ಸಿಬಿ ಎಪ್ರಿಲ್ 15ಕ್ಕೆ ಡೆಲ್ಲಿ ವಿರುದ್ಧ ಮತ್ತು ಎಪ್ರಿಲ್ 17ಕ್ಕೆ ಚೆನ್ನೈ ವಿರುದ್ಧ ಆಡಲಿದೆ.