Site icon Vistara News

IPL 2023: ರೋಚಕ ಪಂದ್ಯದಲ್ಲಿ ಗೆದ್ದ ಆರ್​ಸಿಬಿ

Punjab Kings vs Royal Challengers Bangalore

Punjab Kings vs Royal Challengers Bangalore

ಮೊಹಾಲಿ: ಒಂದೆಡೆ ಮಧ್ಯಮ ಕ್ರಮಾಂಕದಲ್ಲಿ ಜಿತೇಶ್​ ಶರ್ಮ ಅವರ ಅಸಮಾನ್ಯ ಹೋರಾಟ, ಮತ್ತೊಂದೆಡೆ ಮೊಹಮ್ಮದ್​ ಸಿರಾಜ್​ ಅವರ ಘಾತಕ ಬೌಲಿಂಗ್​ ದಾಳಿ. ಇದು ಗುರುವಾರದ ಐಪಿಎಲ್​ನ ಮೊದಲ ಪಂದ್ಯದ ಹೈಲೆಟ್​ ಆಗಿತ್ತು. ಆದರೆ ಅಂತಿಮವಾಗಿ ಆರ್​ಸಿಬಿ ತಂಡ ಪಂಜಾಬ್​ ವಿರುದ್ಧ 24 ರನ್​ಗಳ ಅಂತರದಿಂದ ಗೆಲುವು ಸಾಧಿಸಿತು. ಈ ಗೆಲುವುನಿಂದಿಗೆ ಆರ್​ಸಿಬಿ ತಾನಾಡಿದ ಆರು ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿತು.

ಪಂಜಾಬ್ ಕ್ರಿಕೆಟ್ ಸಂಸ್ಥೆ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಗುರುವಾರದ ಐಪಿಎಲ್​ನ ಡಬಲ್​ ಹೆಡರ್​ನ ಮೊದಲ​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 174 ರನ್​ ಗಳಿಸಿದೆ. ಜವಾಬಿತ್ತ ಪಂಜಾಬ್​ ಕಿಂಗ್ಸ್​ 18.2 ಓವರ್​ಗಳಲ್ಲಿ 150 ರನ್​ ಗಳಿಸಿ ಆಲೌಟ್​ ಆಯಿತು.

ಗುರಿ ಬೆನ್ನಟ್ಟಿದ ಪಂಜಾಬ್​ ಕಿಂಗ್ಸ್​ ಆರಂಭದಲ್ಲೇ ವಿಕೆಟ್​ ಕೈಚೆಲ್ಲಿತು. ಮೊಹಮ್ಮದ್​ ಸಿರಾಜ್​ ಮೊದಲ ವಿಕೆಟ್​ ಕಿತ್ತು ಆರ್​ಸಿಬಿಗೆ ಮುನ್ನಡೆ ತಂದುಕೊಟ್ಟರು. ಇಲ್ಲಿಂದ ಪಂಜಾಬ್​ ಕುಸಿತವು ಆರಂಭಗೊಂಡಿತು. ಬಿಗ್​ ಹಿಟ್ಟರ್​ಗಳಾದ ಲಿವಿಂಗ್​ಸ್ಟೋನ್(2)​, ಸ್ಯಾಮ್​ ಕರನ್(10)​, ಮ್ಯಾಥ್ಯೂ ಶಾರ್ಟ್​(8) ಪೆವಿಲಿಯನ್​ ಪರೇಡ್​ ನಡೆಸಿದರು.

ಮಧ್ಯಮ ಕ್ರಮಾಂಕದಲ್ಲಿ ಜಿತೇಶ್​ ಶರ್ಮ ಅವರು ನಡೆಸಿದ ಅಸಮಾನ್ಯ ಹೋರಾಟದಿಂದ ಪಂಜಾಬ್​ ಒಂದು ಹಂತದಲ್ಲಿ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಮೊಹಮ್ಮದ್​ ಸಿರಾಜ್​ ಅವರು ಇದಕ್ಕೆ ಅನುವು ಮಾಡಿಕೊಡಲಿಲ್ಲ. ಘಾತಕ ಬೌಲಿಂಗ್​ ದಾಳಿ ನಡೆಸಿ 4 ವಿಕೆಟ್​ ಕಿತ್ತರು. ಜಿತೇಶ್​ ಶರ್ಮ 27 ಎಸೆತಗಳಿಂದ 41 ರನ್​ ಬಾರಿಸಿದರು. ಪ್ರಭ್ ಸಿಮ್ರಾನ್ ಸಿಂಗ್ 46 ರನ್​ ಗಳಿಸಿದರು.

ತಾಳ್ಮೆಯುತ ಬ್ಯಾಟಿಂಗ್​ ನಡೆಸಿದ ಕೊಹ್ಲಿ-ಡು ಪ್ಲೆಸಿಸ್​

ಇದಕ್ಕೂ ಮುನ್ನ ಇನಿಂಗ್ಸ್​ ಆರಂಭಿಸಿದ ಹಂಗಾಮಿ ನಾಯಕ ವಿರಾಟ್​ ಕೊಹ್ಲಿ ಮತ್ತು ಫಾಫ್​ ಡು ಪ್ಲೆಸಿಸ್​ ಅವರು ಎಂದಿನಂತೆ ಬಿರುಸಿನ ಆಟವಾಡದೆ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದರು. ಈ ಹಿಂದಿನ ಪಂದ್ಯದಲ್ಲಿ ಕಂಡು ಬಂದ ಬ್ಯಾಟಿಂಗ್​ ಅಬ್ಬರ ಅಷ್ಟಾಗಿ ಈ ಪಂದ್ಯದಲ್ಲಿ ಕಂಡು ಬರಲಿಲ್ಲ. ಇದೇ ಕಾರಣಕ್ಕೆ ಪವರ್​ ಪ್ಲೇಯಲ್ಲಿ ಕೇವಲ 59 ರನ್​ಗಳು ಮಾತ್ರ ಒಟ್ಟುಗೂಡಿತು. ಉಭಯ ಆಟಗಾರರು ನಿಧಾನಗತಿಯಲ್ಲಿ ಬ್ಯಾಟಿಂಗ್​ ನಡೆಸಿ ಅರ್ಧಶತಕ ಪೂರೈಸಿದರು.

40 ಎಸೆತಗಳಿಂದ ವಿರಾಟ್​ ಕೊಹ್ಲಿ ತಮ್ಮ ಅರ್ಧಶತಕ ಪೂರ್ತಿಗೊಳಿಸಿದರು. 15ನೇ ಓವರ್​ ವೇಳೆಗೆ ಬ್ಯಾಟಿಂಗ್​ಗೆ ಕೊಂಚ ವೇಗ ನೀಡಿದ ಕೋಹ್ಲಿ ಅವರು ನಥಾನ್​ ಎಲ್ಲಿಸ್​ ಅವರಿಗೆ ಸಿಕ್ಸರ್​ ರುಚಿ ತೋರಿಸಿದರು. ಮತ್ತೊಂದು ತುದಿಯಲ್ಲಿ ಡು ಪ್ಲೆಸಿಸ್​ ಅವರು ದೊಡ್ಡ ಹೊಡೆತ ಬಾರಿಸಲು ಯತ್ನಿಸುತ್ತಿದ್ದರೂ ಮೈದಾನ ದೊಡ್ಡದಾಗಿದ್ದ ಕಾರಣ ಬೌಂಡರಿ ಹೋಗುತ್ತಿರಲಿಲ್ಲ. ಇದೇ ವೇಳೆ ಅವರಿಗೆ ಒಂದು ಜೀವದಾನ ಸಿಕ್ಕಿತು. ಸ್ಯಾಮ್​ ಕರನ್​ ಅವರ ಎಸೆತದಲ್ಲಿ ಕೀಪರ್​ ಜಿತೇಶ್​ ಶರ್ಮ ಅವರು ಸುಲಭದ ಕ್ಯಾಚ್​ ಕೈಚೆಲ್ಲಿದರು. ಈ ವೇಳೆ ಡು ಪ್ಲೆಸಿಸ್​ 68 ರನ್​ ಗಳಿಸಿದ್ದರು.

ವಿರಾಟ್ ಕೊಹ್ಲಿ ಅವರು 59 ರನ್​ ಗಳಿಸಿ ಹರ್‌ಪ್ರೀತ್ ಬ್ರಾರ್​ ಅವರಿಗೆ ವಿಕೆಟ್​ ಒಪ್ಪಿಸಿದರು. ಜಿತೇಶ್​ ಶರ್ಮಾ ಈ ಕ್ಯಾಚನ್ನು ಚಿರತೆಯಂತೆ ಜಿಗಿದು ಒಂದೇ ಕೈಯಲ್ಲಿ ಹಿಡಿದು ಕೊಹ್ಲಿಗೆ ಪೆವಿಲಿಯನ್​ ದಾರಿ ತೋರಿಸಿದರು. 16 ಓವರ್​ ತನಕ ಬ್ಯಾಟಿಂಗ್​ ನಡೆಸಿದ ಕೊಹ್ಲಿ ಅವರು ಡು ಪ್ಲೆಸಿಸ್​ ಜತೆ ಸೇರಿ ಮೊದಲ ವಿಕೆಟ್​ಗೆ 137 ರನ್​ಗಳ ಜತೆಯಾಟ ನಡೆಸಿದರು. ಕೊಹ್ಲಿ ವಿಕೆಟ್​ ಬಿದ್ದ ಮರು ಎಸೆತದಲ್ಲೇ ಮ್ಯಾಕ್ಸ್​ವೆಲ್​ ವಿಕೆಟ್​ ಕೂಡ ಕಿತ್ತ ಹರ್‌ಪ್ರೀತ್ ಬ್ರಾರ್ ಆರ್​ಸಿಬಿಗೆ ಅವಳಿ ಆಘಾತವಿಕ್ಕಿದರು. ಮ್ಯಾಕ್ಸ್​ವೆಲ್​ ಶೂನ್ಯ ಸುತ್ತಿದರು.

ಕೊಹ್ಲಿ ಮತ್ತು ಮ್ಯಾಕ್ಸ್​ವೆಲ್​ ವಿಕೆಟ್​ ಪತನದ ಬಳಿಕ 14 ರನ್​ ಅಂತರದಲ್ಲಿ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದ ಡು ಪ್ಲೆಸಿಸ್​ ವಿಕೆಟ್​ ಕೂಡ ಪತನಗೊಂಡಿತು. ಡು ಪ್ಲೆಸಿಸ್​ 56 ಎಸೆತಗಳ ಮುಂದೆ 84 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ ತಲಾ 5 ಬೌಂಡರಿ ಮತ್ತು ಸಿಕ್ಸರ್​ ದಾಖಲಾಯಿತು. ಪಂಜಾಬ್​ ಪರ ನಥಾನ್​ ಎಲ್ಲಿಸ್​ 41 ರನ್​ ನೀಡಿ ದುಬಾರಿಯಾದರು. ದಿನೇಶ್​ ಕಾರ್ತಿಕ್​ ಅವರ ಕಳಪೆ ಬ್ಯಾಟಿಂಗ್​ ಈ ಪಂದ್ಯದಲ್ಲಿಯೂ ಕಂಡುಬಂದಿತು. ಕೇವಲ ಒಂದು ಬೌಂಡರಿಗೆ ಸೀಮಿತರಾದರು. ಹರ್​ಪ್ರೀತ್​ ಬ್ರಾರ್​ 2 ವಿಕೆಟ್​ ಕಿತ್ತರು.

ಇದನ್ನೂ ಓದಿ IPL 2023: ಒಂದು ಸಾವಿರ ಪಂದ್ಯದ ಹೊಸ್ತಿಲಲ್ಲಿ ಐಪಿಎಲ್​

ಭುಜದ ನೋವಿನಿಂದ ಬಳಲುತ್ತಿರುವ ಶಿಖರ್​ ಧವನ್ ಅವರು ಈ ಪಂದ್ಯದಲ್ಲಿಯೂ ಕಣಕ್ಕಿಳಿಯಲಿಲ್ಲ. ಹೀಗಾಗಿ ಕಳೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ನಾಯಕತ್ವ ವಹಿಸಿದ ಸ್ಯಾಮ್​ ಕರನ್​ ಅವರೇ ತಂಡವನ್ನು ಮುನ್ನಡೆಸಿದರು. ಇಂಗ್ಲೆಂಡ್​ ತಂಡದ ಹಾರ್ಟ್​ ಹಿಟ್ಟರ್​ ಲಿಯಾಮ್​ ಲಿವಿಂಗ್‌ಸ್ಟೋನ್‌ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 16ನೇ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡಿದರು.

Exit mobile version