ಬೆಂಗಳೂರು: ಆರ್‌ಸಿಬಿ(RCB) ತಂಡ ಆಡಿದ ಮೊದಲ ಪಂದ್ಯದಲ್ಲಿಯೇ ಭರ್ಜರಿ ಗೆಲುವು ದಾಖಲಿಸಿ ಮೆರೆದಾಡಿದೆ. ತಂಡದ ಪ್ರದರ್ಶನ ಕಂಡ ಅಭಿಮಾನಿಗಳು ಈ ಸಲ ಕಪ್ ನಿಜವಾಗಿಯೂ ನಮ್ಮದೇ ಎಂದು ಹೇಳಲು ಆರಂಭಿಸಿದ್ದಾರೆ. ಆದರೆ ಆರ್ಸಿಬಿಯ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್(AB de Villiers) ಮಾತ್ರ ಈ ಸಲ ಕಪ್ ನಮ್ಮದಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇದಕ್ಕೆ ಅವರು ಕಾರಣವನ್ನು ತಿಳಿಸಿದ್ದಾರೆ.
ಮಾರ್ಚ್ 26 ರಂದು ಆರ್‌ಸಿಬಿ ಪ್ರಾಂಚೈಸಿಯು “ಅನ್ಬಾಕ್ಸ್ ಆರ್‌ಸಿಬಿ” ಎಂಬ ಕಾರ್ಯಕ್ರಮ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಆರ್ಸಿಬಿಯ ಮಾಜಿ ಆಟಗಾರಾದ ವೆಸ್ಟ್ ಇಂಡೀಸ್ ಕ್ರಿಸ್ ಗೇಲ್ ಮತ್ತು ಎಬಿ ಡಿ ವಿಲಿಯರ್ಸ್ಗೆ ಹಾಲ್ ಆಫ್ ಫೇಮ್ ಗೌರವ ಸೂಚಿಸಲಾಗಿತ್ತು. ಉಭಯ ಆಟಗಾರರು ಆರ್‌ಸಿಬಿ ತಂಡಕ್ಕೆ ನೀಡಿದ ಕೊಡುಗೆಗೆ ಗೌರವವಾಗಿ ಆರ್‌ಸಿಬಿ ಫ್ರಾಂಚೈಸಿಯು ಡಿ ವಿಲಿಯರ್ಸ್ ಅವರ ಜೆರ್ಸಿ ಸಂಖ್ಯೆ 17 ಮತ್ತು ಕ್ರಿಸ್ ಗೇಲ್ ಅವರ ಜೆರ್ಸಿ ಸಂಖ್ಯೆ 333ರನ್ನು ಹಾಲ್ ಆಫ್ ಫೇಮ್(Hall of Fame) ಸೇರ್ಪಡೆಗೊಳಿಸಿ ನಿವೃತ್ತಿ ಘೋಷಿಸಿತ್ತು.
ಇದನ್ನೂ ಓದಿ IPL 2023: ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಕೆಕೆಆರ್
ಹಾಲ್ ಆಫ್ ಫೇಮ್ ಸೇರ್ಪಡೆಗೊಂಡ ಬಳಿಕ ಆರ್‌ಸಿಬಿ ಅಭಿಮಾನಿಗಳಿಗಾಗಿ ಎಬಿಡಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದರು. “ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ಡ್ರೆಸ್ಸಿಂಗ್ ರೂಮಿನ ಬಾಲ್ಕನಿಯತ್ತ ಹೆಜ್ಜೆ ಹಾಕಿದಾಗ ನನ್ನ ಕಣ್ಣಂಚಿನಲ್ಲಿ ನೀರು ಜಿನುಗಿತು. ಪ್ರತಿ ಸಲ ಎಬಿಡಿ, ಎಬಿಡಿ ಎಂಬ ಅಭಿಮಾನಿಗಳ ಕೂಗು ನಮ್ಮನ್ನು ಗೆಲುವಿಗಾಗಿ ಹುರಿದುಂಬಿಸುತ್ತಿತ್ತು. ಆದರೆ ಈ ಬಾರಿಯ ಕೂಗಿನಲ್ಲಿ ಬೇರೆಯದ್ದೇ ಭಾವನೆ ಇತ್ತು. ನನಗೆ ಸಹಕಾರ ನೀಡಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಕಳೆದ 15 ವರ್ಷಗಳ ಕಾಯುವಿಕೆ ಈ ವರ್ಷ ಕೊನೆಗಾಣಲಿದೆ. ಈ ಸಲ ಕಪ್ ನಮ್ದೇ” ಎಂದು ಹೇಳಿದ್ದರು.
ಇದನ್ನೂ ಓದಿ IPL 2023: ಮಂಕಡಿಂಗ್ ಮಾಡದೆ ಧವನ್ಗೆ ಜೀವದಾನ ನೀಡಿದ ಆರ್.ಅಶ್ವಿನ್; ವಿಡಿಯೊ ವೈರಲ್
ಆದರೆ ಇದೀಗ ಎಬಿಡಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠವಾಗಿ ಗೋಚರಿಸಿದ್ದರೂ ಕಪ್ ಗೆಲ್ಲುವುದು ಅನುಮಾನ ಎಂದಿದ್ದಾರೆ. “ನಾನು ಕಳೆದ ಬಾರಿ ಹೇಳಿದಂತೆ ಈ ಬಾರಿಯೂ ಗುಜರಾತ್ ಟೈಟಾನ್ಸ್(gujarat titans) ತಂಡ ಈ ಬಾರಿಯೂ ಕಪ್ ಗೆಲ್ಲಲಿದೆ. ಏಕೆಂದರೆ ಈ ತಂಡ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಪಾಂಡ್ಯ ಸಾರಥ್ಯದ ಈ ತಂಡ ನಿಜವಾಗಿಯೂ ಉತ್ತಮ ತಂಡವಾಗಿದೆ. ಹೆಚ್ಚಾಗಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವಿಗಳು ಈ ತಂಡದಲ್ಲಿ ಇಲ್ಲದಿದ್ದರೂ ಅವರ ಪ್ರದರ್ಶನ ಮಾತ್ರ ಹಿರಿಯ ಆಟಗಾರರನ್ನು ಮೀರಿಸುವಂತಿದೆ. ಈಗಾಗಲೇ ಅವರು ಆಡಿದ ಎರಡು ಪಂದ್ಯಗಳಲ್ಲಿಯೂ ಜಯ ಸಾಧಿಸಿದ್ದಾರೆ. ಈ ಬಾರಿಯೂ ಅವರು ಕಪ್ ಗೆಲ್ಲಲು ಅರ್ಹರಾಗಿದ್ದಾರೆ’ ಎಂದು ಎಬಿಡಿ ಹೇಳಿದ್ದಾರೆ.