ಲಕ್ನೋ: ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ಟೀಮ್ ಇಂಡಿಯಾದ ಆಟಗಾರ ರಿಷಭ್ ಪಂತ್(Rishabh Pant) ಈ ಬಾರಿಯ ಐಪಿಎಲ್(IPL 2023) ಟೂರ್ನಿಯಿಂದ ಹೊರಗುಳಿದ ವಿಚಾರ ಎಲ್ಲರಿಗೆ ತಿಳಿದೇ ಇದೆ. ಚೇತರಿಕೆ ಕಾಣುತ್ತಿರುವ ಈ ಯುವ ಆಟಗಾರನಿಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಭ್ ಪಂತ್ ಅವರ ಜೆರ್ಸಿಯನ್ನು ಡಗ್ ಔಟ್ ಮೇಲೆ ತೂಗು ಹಾಕಿದೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರ ರಾತ್ರಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ ಪಂತ್ ಅವರ ಜೆರ್ಸಿಯನ್ನು ತಮ್ಮ ಡಗ್ ಔಟ್ ಮೇಲೆ ಹಾಕಿದೆ. ಡೆಲ್ಲಿ ಫ್ರಾಂಚೈಸಿಯ ಈ ನಡೆಗೆ ಸಾಮಾಜಿಕ ತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಡೆಲ್ಲಿ ತಂಡದ ನಾಯಕನಾಗಿರುವ ಪಂತ್ ಅವರು ಶೀಘ್ರದಲ್ಲೇ ತೇತರಿಕೆ ಕಂಡು ಮತ್ತೆ ಮುಂದಿನಂತೆ ಅವರು ಕ್ರಿಕೆಟ್ ಕ್ಷೇತ್ರಕ್ಕೆ ಬರುವಂತಾಗಲು ಅವರಿಗೆ ಇದೊಂದು ಸ್ಫೂರ್ತಿಯಾಗಲಿ ಎಂಬ ನಿಟ್ಟಿನಲ್ಲಿ ಈ ರೀತಿ ಪಂತ್ ಅವರ ಜೆರ್ಸಿಯನ್ನು ಡಗ್ ಔಟ್ ಮೇಲೆ ಹಾಕಲಾಗಿದೆ ಎಂದು ಫ್ರಾಂಚೈಸಿ ತಿಳಿಸಿದೆ. ಜತೆಗೆ ಕೋಚ್ ರಿಕಿ ಪಾಂಟಿಂಗ್ ಕೂಡ ಪಂತ್ ಅನುಪಸ್ಥಿತಿ ಕಾಡುತ್ತಿರುವುದು ಬೇಸರದ ಸಂಗತಿ ಮುಂದಿನ ಸೀಸನ್ನಲ್ಲಿ ಮತ್ತೆ ಅವರ ಜತೆ ಕೆಲಸ ಮಾಡಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ IPL 2023 : ಬೆಂಗಳೂರಿನಲ್ಲಿ ಇಂದು ಐಪಿಎಲ್ ಹಬ್ಬ; ತಡರಾತ್ರಿಯೂ ಇದೆ ಮೆಟ್ರೋ, ಬಸ್ ಓಡಾಟ; ಪಾರ್ಕಿಂಗ್ ಎಲ್ಲೆಲ್ಲಿ?
ಕಳೆದ ವರ್ಷ ಡಿಸೆಂಬರ್ನಲ್ಲಿ ಪಂತ್ ತಮ್ಮ ಮರ್ಸಿಡೀಸ್ ಕಾರನ್ನು ಚಾಲನೆ ಮಾಡುತ್ತಾ ದೆಹಲಿಯಿಂದ ಉತ್ತರಾಖಂಡದ ರೂರ್ಕೀ ಎಂಬಲ್ಲಿರುವ ತಮ್ಮ ನಿವಾಸಕ್ಕೆ ಹೊರಟಿದ್ದ ಸಂದರ್ಭದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಇದಾದ ಬಳಿಕ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದಿದ್ದರು. ಸದ್ಯ ಅವರು ಮನೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ.
50 ರನ್ ಸೋಲು ಕಂಡ ಡೆಲ್ಲಿ
ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್ನ(IPL 2023) ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ 50 ರನ್ಗಳ ಸೋಲಿಗೆ ತುತ್ತಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್‌ಜೈಂಟ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಪೇರಿಸಿತು. ಜವಾಬಿತ್ತ ಡೆಲ್ಲಿ ಉತ್ತಮ ಆರಂಭ ಪಡೆದ ಹೊರಾತಾಗಿಯೂ ನಾಟಕೀಯ ಕುಸಿತ ಕಂಡು ತನ್ನ ಪಾಲಿನ ಓವರ್ನಲ್ಲಿ 9 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿ ಶರಣಾಯಿತು.