ಚೆನ್ನೈ: 6 ಬಾರಿ ಪ್ರತಿನಿಧಿಸಿದ್ದ ಕೆಕೆಆರ್ ತಂಡವನ್ನು ಕಡೆಗಣಿಸಿ ರಾಬಿನ್ ಉತ್ತಪ್ಪ ಅವರು ಚೆನ್ನೈ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ ಎಂಬ ನೆಟ್ಟಿಗರೊಬ್ಬರ ಆರೋಪಕ್ಕೆ ಇದೀಗ ಉತ್ತಪ್ಪ ತಮ್ಮ ಶೈಲಿಯಲ್ಲಿಯೇ ಉತ್ತರ ನೀಡಿದ್ದಾರೆ. ಚೆನ್ನೈ ತಂಡದ ಜೆರ್ಸಿಯನ್ನು ತೊಟ್ಟು ಚೆನ್ನೈಗೆ ಬೆಂಬಲ ಸೂಚಿಸುತ್ತಿರುವ ಉತ್ತಪ್ಪ ಅವರ ಫೋಟೊವನ್ನು ನೆಟ್ಟಿಗರೊಬ್ಬರು ಟ್ವಿಟರ್ನಲ್ಲಿ ಹಂಚಿಕೊಂಡು ಇದು ಉತ್ತಪ್ಪ ಅವರು ಕೆಕೆಆರ್ ತಂಡಕ್ಕೆ ಮಾಡಿದ ಮೋಸ ಎಂದು ಹೇಳಿದ್ದರು.
ಈ ಘಟನೆ ಕುರಿತು ಪ್ರತಿಕ್ರಿಕೆ ನೀಡಿರುವ ಉತ್ತಪ್ಪ” ನಿಷ್ಠೆ ಮತ್ತು ಗೌರವ ಎನ್ನುವುದನ್ನು ಸಮಾನವಾಗಿ ಕೊಟ್ಟು ತೆಗೆದುಕೊಳ್ಳಬೇಕು” ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಉತ್ತಪ್ಪ ಅವರು ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡು ಯಾವುದೇ ತಂಡಕ್ಕೂ ಬೇಡವಾದ ಸಂದರ್ಭದಲ್ಲಿ ಅವರ ಮೇಲೆ ನಂಬಿಕೆ ಇರಿಸಿ ಚೆನ್ನೈ ತಂಡ ಅವರಿಗೆ ತಂಡದಲ್ಲಿ ಆಡುವ ಅವಕಾಶ ನೀಡಿತ್ತು. ಇದೇ ಆವೃತ್ತಿಯಲ್ಲಿ ಚೆನ್ನೈ ಚಾಂಪಿಯನ್ ಕೂಡ ಆಗಿತ್ತು. ತಮ್ಮನ್ನು ನಂಬಿ ಮತ್ತೆ ಕ್ರಿಕೆಟ್ ಆಡಲು ಅವಕಾಶ ನೀಡಿದ ತಂಡಕ್ಕೆ ಅವರು ಬೆಂಬಲ ಸೂಚಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹಲವರು ಕಾಮೆಂಟ್ ಮಾಡುವ ಮೂಲಕ ಉತ್ತಪ್ಪ ಬೆನ್ನಿಗೆ ನಿಂತಿದ್ದಾರೆ.
ಉತ್ತಪ್ಪ ಅವರು 2022ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. 2006 ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಭಾರತ ತಂಡಕ್ಕೆ ಪಾದರ್ಪಣೆ ಮಾಡಿದ ರಾಬಿನ್ ಉತ್ತಪ್ಪ, 46 ಏಕದಿನ ಪಂದ್ಯಗಳನ್ನು ಆಡಿದ್ದು, 934 ರನ್ ಗಳನ್ನು ಗಳಿಸಿದ್ದಾರೆ. 86 ಅವರ ಸರ್ವಾಧಿಕ ರನ್. 2007 ರ ಟಿ-20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದ ಉತ್ತಪ್ಪ ಪಾಕಿಸ್ತಾನ ವಿರುದ್ಧದ ಸಮಬಲಗೊಂಡ ಪಂದ್ಯದಲ್ಲಿ ಬಾಲ್ ಶೂಟೌಟ್ನಲ್ಲಿ ಗೆಲ್ಲಲು ಪ್ರಧಾನ ಪಾತ್ರ ವಹಿಸಿದ್ದರು. 13 ಅಂತಾರಾಷ್ಟ್ರೀಯ ಟಿ-20 ಪಂದ್ಯವನ್ನಾಡಿರುವ ಅವರು, 118.01 ಸ್ಟ್ರೈಕ್ ರೇಟ್ ನೊಂದಿಗೆ 249 ರನ್ ಗಳಿಸಿದ್ದಾರೆ.
ಇದನ್ನೂ ಓದಿ IPL 2023: ನಿವೃತ್ತಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಧೋನಿ
2015 ರಲ್ಲಿ ಕೊನೆಯ ಬಾರಿ ಜಿಂಬಾಬ್ಬೆ ವಿರುದ್ಧದ ಏಕದಿನ ಹಾಗೂ ಟಿ-20 ಯನ್ನು ಆಡಿದ್ದರು. ಐಪಿಎಲ್ ನಲ್ಲಿ ಮಂಬಯಿ, ಆರ್ ಸಿಬಿ, ಕೆಕೆಆರ್, ರಾಜಸ್ಥಾನ್ ರಾಯಲ್ಸ್, ಸಿಎಸ್ ಕೆ ಪರವಾಗಿ ಆಡಿದ್ದರು. ಐಪಿಎಲ್ ನಲ್ಲಿ 205 ಪಂದ್ಯವನ್ನಾಡಿ ಒಟ್ಟು 4952 ರನ್ ಗಳಿಸಿದ್ದಾರೆ.