ಮುಂಬಯಿ: 16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿಗೆ ಅಖಾಡ ರೆಡಿಯಾಗಿದೆ. ಒನ್ನೊಂದು ದಿನ ಕಳೆದರೆ ಟೂರ್ನಿಗೆ ಅಧಿಕೃತ ಚಾಲನೆ ದೊರೆಯಲಿದೆ. ಬಳಿಕ ಸರಮಾರು 2 ತಿಂಗಳುಗಳ ಕಾಲ ಎಲ್ಲ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಗುಂಗಿನಲ್ಲಿರುತ್ತಾರೆ. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್(Mumbai Indians) ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ಅವರು ಈ ಬಾರಿಯ ಐಪಿಎಲ್ನಲ್ಲಿ ಕೇಲವ ಸೀಮಿತ ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಮುಂಬೈ ಅಭಿಮಾನಿಗಳಲ್ಲಿ ಆತಂಕ ಮೂಡಿದೆ.
ಜೂನ್ನಲ್ಲಿ ನಡೆಯುವ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾ ಕಪ್ ಹಾಗೂ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಹಿನ್ನೆಲೆಯಲ್ಲಿ ಕೆಲಸದ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ರೋಹಿತ್ ಶರ್ಮಾ ಅವರನ್ನು ಐಪಿಎಲ್ ಟೂರ್ನಿಯ ಹಲವು ಪಂದ್ಯಗಳಿಂದ ದೂರ ಇಡಲಾಗುತ್ತಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರೋಹಿತ್ ಶರ್ಮಾ ಹೊರಗುಳಿಯಲಿರುವ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಐಪಿಎಲ್ನ ಕೆಲ ಪಂದ್ಯಗಳಿಂದ ಹೊರಗುಳಿಯುವ ನಿರ್ಧಾರವನ್ನು ರೋಹಿತ್ ಅವರೇ ಕೈಗೊಂಡಿರುವುದಾಗಿ ಮುಂಬೈ ಇಂಡಿನ್ಸ್ ತಂಡದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ IPL 2023: ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ; ಐಪಿಎಲ್ ಫ್ರಾಂಚೈಸಿಗಳಿಗೆ ಬಿಸಿಸಿಐ ಆದೇಶ
2020ರಲ್ಲಿ ರೋಹಿತ್ ಶರ್ಮಾ ಐಪಿಎಲ್ ಟೂರ್ನಿಯ ಕೆಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಈ ವೇಳೆ ಕೀರನ್ ಪೋಲಾರ್ಡ್ ತಂಡ ಮುನ್ನಡೆಸಿದ್ದರು. ಆದರೆ ಪೋಲಾರ್ಡ್ ಈ ಬಾರಿ ಐಪಿಎಲ್ಗೆ ನಿವೃತ್ತಿ ಹೇಳಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಯಾದವ್‌ಗೆ ನಾಯಕತ್ವ ನೀಡಲು ಮುಂಬೈ ಮುಂದಾಗಿದೆ.
ಇದನ್ನೂ ಓದಿ IPL 2023: ಆರ್ಸಿಬಿ ಬಗ್ಗೆ ಭಾವನಾತ್ಮಕ ಸಂದೇಶ ಬರೆದ ಎಬಿ ಡಿ ವಿಲಿಯರ್ಸ್
ಈಗಾಗಲೇ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಅವರು ಗಾಯಗೊಂಡು ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಉಭಯ ಆಟಗಾರರು ಸದ್ಯಕ್ಕೆ ಮುಂದಿನ 5ರಿಂದ 6 ತಿಂಗಳುಗಳ ಕಾಲ ಭಾರತ ತಂಡಕ್ಕೆ ವಾಪಾಸ್ ಆಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಮಹತ್ವದ ಟೂರ್ನಿಗೆ ಕೆಲವೇ ದಿನಗಳಿರುವಾಗ ಲಭ್ಯವಿರುವ ಸ್ಟಾರ್ ಆಟಗಾರರು ಕೂಡ ಗಾಯಕ್ಕೆ ತುತ್ತಾದರೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಲಿದೆ. ಈ ಎಲ್ಲ ಮುನ್ನೆಚ್ಚರಿಕೆಯ ಕ್ರಮಾವಾಗಿ ಕೆಲ ಆಟಗಾರರಿಗೆ ಬಿಸಿಸಿಐ ಈ ಬಾರಿಯ ಐಪಿಎಲ್ನಲ್ಲಿ ಸೀಮಿತ ಪಂದ್ಯಗಳಲ್ಲಿ ಆಡುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.