ಮುಂಬಯಿ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ತಕ್ಷಣ ಐಪಿಎಲ್ನಿಂದ ಹೊರಬಂದು ವಿಶ್ರಾಂತಿ ಪಡೆಯುವುದು ಸೂಕ್ತ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ ಪ್ರಕಟಗೊಂಡಿದೆ. ಇದೇ ವಿಚಾರವಾಗಿ ಮಾತನಾಡಿದ ಸುನಿಲ್ ಗವಾಸ್ಕರ್, ರೋಹಿತ್ ಶರ್ಮ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಏಕೆಂದರೆ ಮುಂಬೈ ತಂಡ ಈಗಾಗಲೇ ಸತತ ಸೋಲಿನಿಂದ ಕಂಗೆಟ್ಟಿದೆ. ಇದರಿಂದ ನಾಯಕನಾಗಿರುವ ರೋಹಿತ್ ಮೇಲೆ ಒತ್ತಡ ಬಿದ್ದಿದೆ. ಒಂದೊಮ್ಮೆ ಅವರು ಪೂರ್ಣ ಪ್ರಮಾಣದಲ್ಲಿ ಐಪಿಎಲ್ ಆಡಿದರೆ, ಮುಂದಿನ ಪಂದ್ಯಗಳಲ್ಲಿಯೂ ಮುಂಬೈ ಸೋಲು ಕಂಡರೆ ಆಗ ಅವರ ಮೇಲೆ ಹೆಚ್ಚಿನ ಒತ್ತಡ ಬಿಳುವ ಸಾಧ್ಯತೆ ಇದೆ. ಇದರಿಂದ ಆಟದ ಕಡೆ ಹೆಚ್ಚಿನ ಗಮನ ನೀಡಲು ಅವರಿಗೆ ಸಾಧ್ಯವಾಗದೆ ಫಾರ್ಮ್ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ಅವರು ಶೀಘ್ರದಲ್ಲೇ ಐಪಿಎಲ್ನಿಂದ ವಿಶ್ರಾಂತಿ ಪಡೆದರೆ ಉತ್ತಮ ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ IPL 2023: ಆರ್ಸಿಬಿಗೆ ಸೇಡಿನ ಪಂದ್ಯ; ಇಂದು ಕೆಕೆಆರ್ ಎದುರಾಳಿ
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ 7 ಪಂದ್ಯಗಳನ್ನು ಆಡಿದ್ದು 181 ರನ್‌ಗಳನ್ನು ಗಳಿಸಿದ್ದಾರೆ. 65 ರನ್ ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಕಳೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಭಾರಿ ಅಂತರದ ಸೋಲು ಕಂಡಿತ್ತು. ಭಾರತ ಮತ್ತು ಆಸೀಸ್ ವಿರುದ್ಧದ ಟೆಸ್ಟ್ ವಿಶ್ವ ಕಪ್ ಫೈನಲ್ ಪಂದ್ಯ ಜೂನ್ 7 ರಿಂದ 11ರವರೆಗೆ ಲಂಡನ್ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ.
ಟೆಸ್ಟ್ ವಿಶ್ವಕಪ್ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಲ್ ರಾಹುಲ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.