Site icon Vistara News

IPL 2023: ಸಿಕ್ಸರ್​ ಮೂಲಕ ಎಬಿಡಿ ದಾಖಲೆ ಮುರಿದ ರೋಹಿತ್​ ಶರ್ಮ

Wankhede Stadium At Mumbai

ಮುಂಬಯಿ: ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮ ಅವರು ಐಪಿಎಲ್​ನಲ್ಲಿ ನೂತನ ಮೈಲುಗಲ್ಲೊಂದನ್ನು ತಲುಪಿದ್ದಾರೆ. ಈ ಮೂಲಕ ಆರ್​ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

ಮುಂಬಯಿಯ ವಾಂಖೇಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್,​ ಸೂರ್ಯಕುಮಾರ್​ ಯಾದವ್​(103*) ಅವರ ಸೊಗಸಾದ ಶತಕ ಮತ್ತು ವಿಷ್ಣು ವಿನೋದ್​ ಅವರ ಬಿರುಸಿನ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಗಳಿಸಿತು. ಜವಾಬಿತ್ತ ಗುಜರಾತ್​ ತನ್ನ ಪಾಲಿನ ಆಟದಲ್ಲಿ 8 ವಿಕೆಟ್​ ಕಳೆದುಕೊಂಡು 191 ರನ್​ ಗಳಿಸಿ ಸಣ್ಣ ಅಂತರದ ಸೋಲು ಕಂಡಿತು.

ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ ಇಂಡಿಯನ್ಸ್​ ಪರ ರೋಹಿತ್​ ಶರ್ಮ ಬಿರುಸಿನ ಆಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. 18 ಎಸೆತಗಳಿಂದ 29 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ 2 ಸಿಕ್ಸರ್​ ಹೊಡೆದ ವೇಳೆ ರೋಹಿತ್​ ಅವರು ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದರು. ಐಪಿಎಲ್​ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ 2ನೇ ಸ್ಥಾನಕ್ಕೇರಿದರು. ಈ ಮೂಲಕ ವಿಲಿಯರ್ಸ್​ ದಾಖಲೆಯನ್ನು ಮುರಿದರು. ವಿಲಿಯರ್ಸ್ 251 ಸಿಕ್ಸರ್​ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದರು. ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಸದ್ಯ ರೋಹಿತ್​ ಶರ್ಮ ಅವರು 253 ಸಿಕ್ಸರ್​ ಸಿಡಿಸುವ ಮೂಲಕ ದ್ವಿತೀಯ ಸ್ಥಾನದಲ್ಲಿದ್ದಾರೆ. ಇದರ ಜತೆಗೆ ರೋಹಿತ್​ಐಪಿಎಲ್​ನಲ್ಲಿ​ ಅತ್ಯಧಿಕ ಸಿಕ್ಸರ್​ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ನಿರ್ಮಿಸಿದರು. ಐಪಿಎಲ್​ ಇತಿಹಾಸದಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್​ ಅವರು ಒಟ್ಟು 357 ಸಿಕ್ಸ್​ಗಳನ್ನು ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ IPL 2023: ಗುಜರಾತ್​ಗೆ ಸೋಲು; ಐಪಿಎಲ್​ ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ!

ರೋಹಿತ್​ ಶರ್ಮ ಅವರು ಈ ಋತುವಿನ ಐಪಿಎಲ್​ನಲ್ಲಿ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡುತ್ತಿಲ್ಲ. ಪದೇ ಪದೇ ಡಕ್ ಔಟ್ ಆಗುತ್ತಿದ್ದಾರೆ. ಬ್ಯಾಟಿಂಗ್​ ಫಾರ್ಮ್​ ಕಳೆದುಕೊಂಡಿರುವ ಅವರು ಮುಂಬರುವ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ಮಾಡಬೇಕಿದೆ. ಇಲ್ಲವಾದಲ್ಲಿ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಭಾರತ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಈಗಾಗಲೇ ಹಲವು ಆಟಗಾರರು ಗಾಯದಿಂದ ಹೊರ ಬಿದ್ದಿದ್ದಾರೆ. ಈ ಮಧ್ಯೆ ನಾಯಕ ರೋಹಿತ್​ ಅವರ ಕಳಪೆ ಬ್ಯಾಟಿಂಗ್​ ಕೂಡ ಟೀಮ್​ ಮ್ಯಾನೆಜ್​ಮೆಂಟ್​​ಗೆ ಚಿಂತೆಗೀಡು ಮಾಡಿದೆ.

Exit mobile version