ಮುಂಬಯಿ: 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಶನಿವಾರ ನಡೆದ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 13 ರನ್ಗಳ ಸೋಲಿಗೆ ತುತ್ತಾಗಿದೆ. ಆದರೆ ಈ ಪಂದ್ಯ ಸೋತರೂ ಮುಂಬೈ ನಾಯಕ ರೋಹಿತ್ ಶರ್ಮಾ ಅವರು ಐಪಿಎಲ್ನಲ್ಲಿ ನೂತನ ಮೈಲುಗಲ್ಲೊಂದನ್ನು ತಲುಪಿದ್ದಾರೆ.
ಪಂಜಾಬ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟುವ ವೇಳೆ ರೋಹಿತ್ ಶರ್ಮ ಅವರು ವಿರುದ್ಧ 27 ಎಸೆತಗಳಲ್ಲಿ 44 ರನ್ ಬಾರಿಸಿದರು. ಈ ಇನಿಂಗ್ಸ್ನಲ್ಲಿ ಅವರು ಮೂರು ಸಿಕ್ಸರ್ ಚಚ್ಚಿದರು. ಇದೇ ವೇಳೆ ಅವರು ಐಪಿಎಲ್ನಲ್ಲಿ 250 ಸಿಕ್ಸರ್ ಬಾರಿಸಿದ ಸಾಧನೆ ಮಾಡಿದರು. ಈ ಸಾಧನೆಗೈದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದರು. ಆದರೆ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರು.
ರೋಹಿತ್ ಸದ್ಯ 233 ಐಪಿಎಲ್ ಪಂದ್ಯಗಳನ್ನು ಆಡಿದ್ದು, 250 ಸಿಕ್ಸರ್ ಬಾರಿಸಿದ್ದಾರೆ. ಇನ್ನು 6058 ರನ್ ಗಳಿಸಿದ್ದಾರೆ. ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ವಿಂಡೀಸ್ ದೈತ್ಯ, ಪಂಜಾಬ್ ಕಿಂಗ್ಸ್ ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಲ್ಲಿದೆ. ಅವರು 375 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಆರ್ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಕಾಣಿಸಿಕೊಂಡಿದ್ದಾರೆ. ಅವರು 251 ಸಿಕ್ಸರ್ ಬಾರಿಸಿದ್ದಾರೆ. ರೋಹಿತ್ ಶರ್ಮ ಮುಂದಿನ ಪಂದ್ಯದಲ್ಲಿ ಎರಡು ಸಿಕ್ಸರ್ ಬಾರಿಸಿದರೆ ಎಬಿಡಿ ಅವರ ದಾಖಲೆಯನ್ನು ಮುರಿಯುವ ಅವಕಾಶವಿದೆ. ಚೆನ್ನೈ ತಂಡದ ನಾಯಕ ಎಂ.ಎಸ್ ಧೋನಿ ಎಂಎಸ್ ಧೋನಿ 235 ಸಿಕ್ಸರ್ನೊಂದಿಗೆ ಸದ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಪಂಜಾಬ್ಗೆ ರೋಚಕ ಗೆಲುವು
ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 31ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್ ಮತ್ತು ಕ್ಯಾಮರೂನ್ ಗ್ರೀನ್ ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಸಣ್ಣ ಅಂತರದಿಂದ ಸೋಲು ಕಂಡಿತು.