ಮುಂಬಯಿ: ಪಂದ್ಯವೊಂdರಲ್ಲಿ ಗೆಲುವೇ ಅಂತಿಮ. ಅಂತೆಯೇ ಭಾನುವಾರ ರಾತ್ರಿ ವಾಂಖೆಡೆಯಲ್ಲಿ ನಡೆದ ಐಪಿಎಲ್ನ (IPL 2023) 1000 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರು ವಿಕೆಟ್ಗಳ ವಿಜಯ ಸಾಧಿಸಿದೆ. ಈ ಮೂಲಕ ಮುಂಬೈ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಏತನ್ಮಧ್ಯೆ, ಮುಂಬೈ ಬ್ಯಾಟಿಂಗ್ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ನಡೆಯಿತು. ಅದುವೇ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಪತನ. ರೋಹಿತ್ ಬೌಲ್ಡ್ ಅಗಿಲ್ಲ. ವಿಕೆಟ್ಕೀಪರ್ ಸಂಜು ಸ್ಯಾಮ್ಸನ್ ಅವರ ಕೈ ತಾಗಿ ಬೇಲ್ಸ್ ಬಿದ್ದಿದೆ ಎಂಬುದು ಅವರೆಲ್ಲರ ವಾದ. ಜನುಮ ದಿನದಂದೇ ರೋಹಿತ್ಗೆ ಮೋಸ ಮಾಡಲಾಗಿದೆ ಎಂಬುದಾಗಿ ಅವರೆಲ್ಲೂ ಆರೋಪಿಸಿದ್ದಾರೆ.
ಭಾನುವಾರ ರೋಹಿತ್ ಶರ್ಮಾ ಅವರ 36 ನೇ ಹುಟ್ಟುಹಬ್ಬವಾಗಿತ್ತು. ಅಂತೆಯೇ ರಾಜಸ್ಥಾನ ನೀಡಿದ್ದ 213 ರನ್ಗಳ ಗುರಿಯನ್ನು ಬೆನ್ನಟ್ಟಲು ಹೊರಟ ಅವರು ವಿಶ್ವಾಸದಿಂದ ಇದ್ದರು. ಜನುಮದಿನದಂದು ದೊಡ್ಡ ಇನಿಂಗ್ಸ್ ಆಡುವ ಭರವಸೆ ಮೂಡಿಸಿದ್ದರು. ಆದರೆ ಇನಿಂಗ್ಸ್ನ ಎರಡನೇ ಓವರ್ ಎಸೆದ ಆರ್ಆರ್ ಬೌಲರ್ ಸಂದೀಪ್ ಶರ್ಮಾ ಅವರನ್ನು ಬೌಲ್ಡ್ ಮಾಡಿದ್ದರು. ಅಷ್ಟರೊಳಗೆ ಅವರುಐದು ಎಸೆತಗಳಲ್ಲಿ ಮೂರು ರನ್ ಮಾತ್ರ ಗಳಿಸಿದ್ದರು.
ಸ್ವಲ್ಪ ಸಮಯದ ನಂತರ, ರೋಹಿತ್ ಅವರ ಔಟ್ ನ್ಯಾಯಯುತವಲ್ಲ ಎಂಬುದಾಗಿ ಅಭಿಮಾನಿಗಳು ಟ್ವೀಟ್ ಮಾಡಲು ಆರಂಭಿಸಿದರು. ಅವರ ಪ್ರಕಾರ ಚೆಂಡು ವಿಕೆಟ್ ಕಡೆಗೆ ಬರುತ್ತಿದ್ದಂತೆ ವಿಕೆಟ್ಕೀಪರ್ ಸಂಜುಸ್ಯಾಮ್ಸನ್ ಅವರ ಗ್ಲವ್ಸ್ ಬೇಲ್ಸ್ಗೆ ತಾಗಿ ಉದುರಿದೆ. ಹೀಗಾಗಿ ರೋಹಿತ್ ಶರ್ಮಾ ಬೌಲ್ಡ್ ಆಗಿಲ್ಲ. ಸಂಜು ಕೈ ತಾಗಿ ಬೇಲ್ಸ್ ಬಿದ್ದಿದೆ ಎಂಬುದು ಅವರ ಆರೋಪ. ಇದು ಮೋಸದಾಟ ಹಾಗೂ ಅಂಪೈರ್ಗಳ ವೈಫಲ್ಯ ಎಂಬದಾಗಿ ಅಭಿಮಾನಿಗಳು ಸೋಶೀಯಲ್ ಮೀಡಿಯಾಗಳಲ್ಲಿ ಗದ್ದಲ ಎಬ್ಬಿಸಿದರು.
ಬೌಲ್ಡ್ ಆಗಿದ್ದೇನೆ ಎಂಬ ಕಾರಣಕ್ಕೆ ರೋಹಿತ್ ಶರ್ಮಾ ಕೂಡ ರಿವ್ಯೂ ತೆಗೆದುಕೊಳ್ಳಲಿಲ್ಲ. ಅಂಪೈರ್ಗಳು ಕೂಡ ಮರುಪರಿಶೀಲನೆ ಮಾಡಲು ಮುಂದಾಗಿಲ್ಲ. ಎಲ್ಲವೂ ರೋಹಿತ್ ಶರ್ಮಾ ಅವರ ವಿರುದ್ಧ ನಡೆಯಿತು ಎಂಬುದು ಅಭಿಮಾನಿಗಳ ಬೇಸರ.
ಪಂದ್ಯದಲ್ಲಿ ಏನಾಯಿತು?
ಸೂರ್ಯಕುಮಾರ್ ಯಾದವ್ (55) ಅರ್ಧ ಶತಕ ಹಾಗೂ ಟಿಮ್ ಡೇವಿಡ್ (45) ಸ್ಫೋಟಕ ಬ್ಯಾಟಿಂಗ್ ನೆರವು ಪಡೆದ ಮುಂಬಯಿ ಇಂಡಿಯನ್ಸ್ ತಂಡ ಐಪಿಎಲ್ನ 1000ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 6 ವಿಕೆಟ್ಗಳ ವಿಜಯ ಸಾಧಿಸಿತು. ಇದರೊಂದಿಗೆ ಆರ್ಆರ್ ತಂಡದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ (124 ರನ್) ಅವರ ಚೊಚ್ಚಲ ಶತಕದ ಸಾಧನೆ ಮಂಕಾಯಿತು. ಈ ಗೆಲುವಿನೊಂದಿಗೆ ಮುಂಬಯಿ ಇಂಡಿಯನ್ಸ್ ತಂಡ ಹಾಲಿ ಆವೃತ್ತಿಯಲ್ಲಿ ನಾಲ್ಕನೇ ಜಯ ಸಾಧಿಸಿತು.
ಇದನ್ನೂ ಓದಿ : IPL 2023 : 1000ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ತಂಡಕ್ಕೆ ಜಯ, ಜೈಸ್ವಾಲ್ ಶತಕ ವ್ಯರ್ಥ
ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದಕ್ಕೆ ಪೂರಕವಾಗಿ ಆಡಿದ ಆರ್ಆರ್ ಬ್ಯಾಟರ್ಗಳು ಎದುರಾಳಿ ತಂಡಕ್ಕೆ 213 ರನ್ಗಳ ಗೆಲುವಿನ ಗುರಿಯನ್ನು ಒಡ್ಡಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್ ತಂಡ 19.3 ಓವರ್ಗಳಲ್ಲಿ 214 ರನ್ ಬಾರಿಸಿ ಜಯ ಸಾಧಿಸಿತು. ಮುಂಬೈ ಗೆಲುವಿಗೆ ಕೊನೇ ಓವರ್ನಲ್ಲಿ 16 ರನ್ ಬೇಕಾಗಿತ್ತು. ಜೇಸನ್ ಹೋಲ್ಡರ್ ಬೌಲಿಂಗ್ನಲ್ಲಿ ಟಿಮ್ ಡೇವಿಡ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.