ಹೈದರಾಬಾದ್: ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ(Rohit Sharma) ಅವರು ಐಪಿಎಲ್ನಲ್ಲಿ(IPL 2023) ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್ ಕ್ರಿಕೆಟ್ನಲ್ಲಿ 6 ಸಾವಿರ ರನ್ ಪೂರೈಸಿದ 4ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ದ 14 ರನ್ ಗಳಿಸುತ್ತಿದಂತೆ ರೋಹಿತ್ ಶರ್ಮಾ ಐಪಿಎಲ್ನಲ್ಲಿ 6 ಸಾವಿರ ರನ್ ಪೂರೈಸಿದರು. ಈ ಮೂಲಕ ವಿರಾಟ್ ಕೊಹ್ಲಿ, ಶಿಖರ್ ಧವನ್ ಹಾಗೂ ಡೇವಿಡ್ ವಾರ್ನರ್ ಬಳಿಕ ಐಪಿಎಲ್ನಲ್ಲಿ 6000 ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡರು.
ಈ ಸಾಧನೆ ಮಾಡಿದ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಕೊಹ್ಲಿ 220 ಇನಿಂಗ್ಸ್ ಮೂಲಕ ಒಟ್ಟು 6844 ರನ್ ಕಲೆಹಾಕಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಶಿಖರ್ ಧವನ್ ಕಾಣಿಸಿಕೊಂಡಿದ್ದಾರೆ. ಧವನ್ 209 ಇನಿಂಗ್ಸ್ಗಳ ಮೂಲಕ ಒಟ್ಟು 6477 ರನ್ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ ಇದ್ದಾರೆ. ಅವರು 167 ಇನಿಂಗ್ಸ್ಗಳ ಮೂಲಕ ವಾರ್ನರ್ 6109 ರನ್ ಪೇರಿಸಿದ್ದಾರೆ.
ಅತ್ಯಂತ ಕಡಿಮೆ ಇನಿಂಗ್ಸ್ ಮೂಲಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಸಾಧನೆ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. ಅವರು 167 ಇನಿಂಗ್ಸ್ಗಳಲ್ಲಿ ಈ ಮೈಲುಗಲ್ಲನ್ನು ತಲುಪಿದ್ದರು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮ18 ಎಸೆತಗಳಿಂದ 28 ರನ್ ಬಾರಿಸಿದ್ದರು. ಇದರಲ್ಲಿ 6 ಬೌಂಡರಿ ದಾಖಲಾಗಿತ್ತು.
ಇದನ್ನೂ ಓದಿ IPL 2023: ಮುಂಬೈಗೆ ಹ್ಯಾಟ್ರಿಕ್ ಗೆಲುವು; ಐಪಿಎಲ್ ಅಂಕ ಪಟ್ಟಿ ಹೇಗಿದೆ?
ಮುಂಬೈಗೆ ಗೆಲುವು
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಮುಂಬೈ ಇಂಡಿಯನ್ಸ್ ಕ್ಯಾಮರಾನ್ ಗ್ರೀನ್ ಮತ್ತು ತಿಲಕ್ ವರ್ಮ ಅವರ ಉತ್ತಮ ಆಟದಿಂದಾಗಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟಿಗೆ 192 ರನ್ ಬಾರಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡವು 19.5 ಓವರ್‌ಗಳಲ್ಲಿ 178 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.