ಚೆನ್ನೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಅವರು ಐಪಿಎಲ್ನಲ್ಲಿ ಕೆಟ್ಟ ದಾಖಲೆಯೊಂದನ್ನು ಬರೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸಾಗುತ್ತಿರುವ ಪಂದ್ಯದಲ್ಲಿ ಶೂನ್ಯ ಸುತ್ತುವ ಮೂಲಕ ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಡಕೌಟ್ ಆದ ಆಟಗಾರ ಎಂಬ ಅವಮಾನಕ್ಕೆ ಒಳಗಾದರು.
ಚೆಪಾಕ್ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಮುಂಬೈ ಆರಂಭಿಕ ಆಘಾತ ಎದುರಿಸಿತು. ಬ್ಯಾಟಿಂಗ್ ಭಡ್ತಿ ಪಡೆದು ಬಂದ ಕ್ಯಾಮರೂನ್ ಗ್ರೀನ್(6) ಮತ್ತು ಇಶಾನ್ ಕಿಶನ್(7) ರನ್ಗೆ ಆಟ ಮುಗಿಸಿದರು. ಈ ಬಳಿಕ ಆಡಲಿಳಿದ ರೋಹಿತ್ ಶರ್ಮ ಅವರು ದೀಪಕ್ ಚಹರ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡುವ ಪ್ರಯತ್ನದಲ್ಲಿ ಜಡೇಜಾಗೆ ಕ್ಯಾಚ್ ನೀಡಿ ಔಟಾದರು. ಮೂರು ಎಸೆತ ಎದುರಿಸಿದ ಅವರು ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇದೇ ವೇಳೆ ಅವರು ಐಪಿಎಲ್ನಲ್ಲಿ 16ನೇ ಬಾರಿ ಡಕೌಟ್ ಆದ ಕೆಟ್ಟ ದಾಖಲೆ ಬರೆದರು. ಈ ಹಿಂದೆ ಸುನೀಲ್ ನಾರಾಯಣ್ ಅವರು 15 ಬಾರಿ ಶೂನ್ಯ ಸುತ್ತಿದ್ದರು. ಇದೀಗ ಅವರನ್ನು ಹಿಂದಿಕ್ಕಿ ರೋಹಿತ್ ಅಗ್ರಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ IPL 2023: ಬ್ಯಾಟಿಂಗ್ ವೈಫಲ್ಯವೇ ತಂಡದ ಸೋಲಿಗೆ ಕಾರಣ; ನಾಯಕ ಸಂಜು ಸ್ಯಾಮ್ಸನ್
ರೋಹಿತ್ ಶರ್ಮ ಅವರು ಈ ಋತುವಿನ ಐಪಿಎಲ್ನಲ್ಲಿ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡುತ್ತಿಲ್ಲ. ಪದೇ ಪದೇ ಡಕ್ ಔಟ್ ಆಗುತ್ತಿದ್ದಾರೆ. ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವ ಅವರು ಮುಂಬರುವ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಮಾಡಬೇಕಿದೆ. ಇಲ್ಲವಾದಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಈಗಾಗಲೇ ಹಲವು ಆಟಗಾರರು ಗಾಯದಿಂದ ಹೊರ ಬಿದ್ದಿದ್ದಾರೆ. ಈ ಮಧ್ಯೆ ನಾಯಕ ರೋಹಿತ್ ಅವರ ಕಳಪೆ ಬ್ಯಾಟಿಂಗ್ ಕೂಡ ಟೀಮ್ ಮ್ಯಾನೆಜ್ಮೆಂಟ್ಗೆ ಚಿಂತೆಗೀಡು ಮಾಡಿದೆ.