ಮುಂಬಯಿ: ಐಪಿಎಲ್ನ(IPL 2023) ಭಾನುವಾರದ ಮುಖಾಮುಖಿಯಲ್ಲಿ ಕನ್ನಡಿಗರ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಉಭಯ ತಂಡಗಳಿಗೂ ಗಾಯದ್ದೇ ಪ್ರಮುಖ ಚಿಂತೆಯಾಗಿದೆ. ಕೊರೊನಾದ ಮೂರು ವರ್ಷಗಳ ಬಳಿಕ ಆರ್ಸಿಬಿ ಸಂಪೂರ್ಣ ಸಾಮರ್ಥ್ಯದ ಪ್ರೇಕ್ಷಕರ ಮುಂದೆ ತವರಿನಲ್ಲಿ ಪಂದ್ಯವನ್ನಾಡುತ್ತಿದೆ. ಹೀಗಾಗಿ ಈ ಪಂದ್ಯ ರೋಚಕತೆಯಿಂದ ಸಾಗುವ ನಿರೀಕ್ಷೆ ಇದೆ.
ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರು ಮೊಣಕಾಲಿನ ಗಾಯದಿಂದ ಚೇತರಿಕೆ ಕಾಣುತ್ತಿರುವ ಕಾರಣ ಮೊದಲ ಪಂದ್ಯದಲ್ಲಿ ಅವರು ಆಡುವುದು ಅನುಮಾನ ಎಂದು ಈಗಾಗಲೇ ತಂಡದ ಮೂಲಗಳು ಮಾಹಿತಿ ನೀಡಿದೆ. ಇನ್ನೊಂದೆಡೆ ಜೋಶ್ ಹ್ಯಾಜಲ್ವುಡ್ ಕೂಡ ಮೊದಲ 7 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇನ್ನು ರಜತ್ ಪಾಟೀದರ್ ಕೂಡ ಸಂಪೂರ್ಣ ಫಿಟ್ ಆಗಿಲ್ಲ. ಇದು ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಖಷಿಯ ವಿಚಾರವೆಂದರೆ ವಿರಾಟ್ ಕೊಹ್ಲಿ ಅವರು ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ತಂಡ ಅವರ ಬ್ಯಾಟಿಂಗ್ ಮೇಲೆ ಹೆಚ್ಚಿನ ವಿಶ್ವಾಸವಿರಿಸಿದೆ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಕೂಡ ಉತ್ತಮ ಲಯದಲ್ಲಿದ್ದಾರೆ.
ಮುಂಬೈ ತಂಡದಲ್ಲಿಯೂ ಗಾಯದ ಸಮಸ್ಯೆ ಎದ್ದು ಕಾಣುತ್ತಿದೆ. ತಂಡ ಈಗಾಗಲೇ ಪ್ರಧಾನ ವೇಗಿ ಜಸ್ಪ್ರೀತ್ ಬುಮ್ರಾ ಅವರ ಸೇವೆ ಕಳೆದುಕೊಂಡಿದೆ. ಬುಮ್ರಾ ಬದಲು ಕೇರಳದ ಸಂದೀಪ್ ವಾರಿಯರ್ ಬದಲಿ ಆಟಗಾರನಾಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇನ್ನೊಂದೆಡೆ ಪದಾರ್ಪಣ ಪಂದ್ಯವನ್ನಾಡಲು ಕಾತರದಿಂದ ಕಾಯುತ್ತಿದ್ದ ಅರ್ಜುನ್ ತೆಂಡೂಲ್ಕರ್ ಅವರು ಗಾಯದಿಂದ ಬಳಲುತ್ತಿದ್ದಾರೆ. ಈ ವಿಚಾರವನ್ನು ತಂಡದ ಕೋಚ್ ಖಚಿತ ಪಡಿಸಿದ್ದಾರೆ. ಹೀಗಾಗಿ ಅರ್ಜುನ್ ಅವರು ಐಪಿಎಲ್ ಆಡಲು ಇನ್ನು ಕೆಲ ದಿನಗಳ ಕಾಲ ಕಾಯಬೇಕಾಗಿದೆ.
ಬೌಲಿಂಗ್ ವಿಭಾಗದ ಎಲ್ಲ ಜವಾಬ್ದಾರಿ ಜೋಫ್ರಾ ಆರ್ಚರ್ ಮೇಲಿದೆ. ಬುಮ್ರಾ ಅನುಪಸ್ಥಿತಿಯನ್ನು ಅವರು ಸಮರ್ಥವಾಗಿ ನಿಭಾಯಿಸಬೇಕಿದೆ. ಇವರಿಗೆ ಆಸೀಸ್ ಆಲ್ರೌಂಡರ್ ಕೇಮರೂನ್ ಗ್ರೀನ್ ಅವರು ಉತ್ತಮ ಸಾಥ್ ನೀಡಬೇಕಿದೆ. ಬ್ಯಾಟಿಂಗ್ ವಿಭಾಗದಲ್ಲಿ ಟಿ20 ನಂ.1 ಆಟಗಾರ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ನಾಯಕ ರೋಹಿತ್ ಶರ್ಮಾ ಸಿಡಿದು ನಿಂತರೆ ತಂಡದ ದೊಡ್ಡಕ್ಕೆ ಅಡ್ಡಿಯಿಲ್ಲ. ಆದರೆ ಸೂರ್ಯಕುಮಾರ್ ಬ್ಯಾಟಿಂಗ್ ಸದ್ದು ಕೊಂಚ ಕಡಿಮೆಯಾದಂತೆ ತೋರುತ್ತಿದೆ. ಕಳೆದ ಆಸೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಹ್ಯಾಟ್ರಿಕ್ ಗೋಲ್ಡನ್ ಡಕ್ ಸಂಕಟ ಎದುರಿಸಿದ್ದರು. ಹೀಗಾಗಿ ಅವರು ಈ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾದ ಕಾರಣ ಇಲ್ಲಿ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಇದೆ. ಒಟ್ಟಾರೆ ಈ ಪಂದ್ಯವನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ರಾತ್ರಿ 1.30ರವರೆಗೂ ಮೆಟ್ರೋ ಸಂಚಾರ ಸಮಯ ವಿಸ್ತರಣೆ
ಬೆಂಗಳೂರಲ್ಲಿ ನಡೆಯುವ ಐಪಿಎಲ್ ಪಂದ್ಯಾವಳಿಯ (IPL 2023) ದಿನದಂದು ಮೆಟ್ರೋ ಸಂಚಾರದ (Metro Timings) ಸಮಯವನ್ನು ಬಿಎಂಆರ್‌ಸಿಎಲ್ ವಿಸ್ತರಿಸಿದೆ. ಈ ಮೂಲಕ ಆರ್ಸಿಬಿ ಅಭಿಮಾನಿಗಳಿಗೆ ತಮ್ಮ ತಂಡವನ್ನು ಬೆಂಗಳಿಸುವ ಸಲುವಾಗಿ ಮೆಟ್ರೋ ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಂಗಳೂರಲ್ಲಿ ಏಪ್ರಿಲ್ 2, 10, 17, 23, 26 ಹಾಗೂ ಮೇ 21ರಂದು ಐಪಿಎಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ರಾತ್ರಿ ಕ್ರಿಕೆಟ್ ಪಂದ್ಯಾವಳಿ ನಡೆಯುವ ವೇಳೆ ಬೈಯಪ್ಪನಹಳ್ಳಿ – ಕೆಂಗೇರಿ ಮತ್ತು ನಾಗಸಂದ್ರ – ರೇಷ್ಮೆ ಟರ್ಮಿನಲ್‌ನಿಂದ ಕೊನೆಯ ರೈಲು ಸೇವೆಯು ಮಧ್ಯರಾತ್ರಿ 1 ಗಂಟೆ ಹೊರಡಲಿದ್ದು, ಕೆಂಪೇಗೌಡ ನಿಲ್ದಾಣದಿಂದ 1.30ಕ್ಕೆ ಕೊನೇ ರೈಲು ಓಡಾಡಲಿದೆ. ಇತ್ತ ಹೊಸ ರೈಲು ಮಾರ್ಗವಾದ ವೈಟ್ ಫೀಲ್ಡ್ ಹಾಗೂ ಕೆ.ಆರ್. ಪುರ ನಡುವಿನ ರೈಲು ಸೇವೆಯನ್ನು ವಿಸ್ತರಿಸಲಾಗಿಲ್ಲ.
ಗ್ರಾಹಕರಿಗೆ ಅನುಕೂಲವಾಗಲು 50 ರೂಪಾಯಿ ಪೇಪರ್ ಟಿಕೆಟ್ ಅನ್ನು ಪಂದ್ದ ನಡೆಯುವ ದಿನದಂದು ಮಧ್ಯಾಹ್ನ 3 ಗಂಟೆಗೆ ವಿತರಣೆ ಮಾಡಲಾಗುತ್ತದೆ. ಎಂ.ಜಿ ರಸ್ತೆ, ಕಬ್ಬನ್ ಪಾರ್ಕ್ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ತಲುಪಬಹುದಾಗಿದೆ. ಪೇಪರ್ ಟಿಕೆಟ್ ಖರೀದಿ ಮಾಡುವವರಿಗೆ ಮಾತ್ರ ಈ ದರ ಅನ್ವಯವಾಗಲಿದ್ದು, ಉಳಿದಂತೆ ಕಾರ್ಡ್ ಹಾಗೂ ಕ್ಯೂಆರ್ ಹೋಲ್ಡರ್‌ಗಳಿಗೆ ಸಾಮಾನ್ಯ ದರ ಇರಲಿದೆ.