ಮುಂಬಯಿ: ಈ ಬಾರಿಯ ಐಪಿಎಲ್ನಲ್ಲಿ(IPL 2023) ಮಹತ್ವದ ಬದಲಾವಣೆಯೊಂದನ್ನು ಜಾರಿಗೆ ತರಲು ಐಪಿಎಲ್ ಮಂಡಳಿ ಮುಂದಾಗಿದೆ. ಟಾಸ್ ಗೆದ್ದ ನಂತರವೂ ಬ್ಯಾಟಿಂಗ್ ಮತ್ತು ಬೌಲಿಂಗ್ ಆಯ್ಕೆಯಲ್ಲಿ ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಟಾಸ್ಗೂ ಮುನ್ನ ಅಂತಿಮ 11ರ ಆಡುವ ಬಳಗವನ್ನು ತಂಡಗಳು ಪ್ರಕಟಿಸಬೇಕಿತ್ತು. ಆದರೆ ಇದೀಗ ಟಾಸ್ ನಂತರವೂ ತಂಡವನ್ನು ಪ್ರಕಟಿಸುವ ಅವಕಾಶ ನೀಡಲಾಗಿದೆ. ಪರಿಸ್ಥಿತಿ ಹಾಗೂ ಪಿಚ್ಗೆ ತಕ್ಕಂತೆ ಆಟಗಾರರನ್ನು ಆಯ್ಕೆ ಮಾಡಿ ಅತ್ಯುತ್ತಮ ತಂಡವನ್ನು ಕಣಕ್ಕಿಳಿಸುವ ಅವಕಾಶ ತಂಡಗಳಿಗೆ ದೊರೆಯುತ್ತದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿರುವುದಾಗಿ ಕ್ರಿಕ್ಇನ್ಫೋ ವರದಿ ಮಾಡಿದೆ. ಜತೆಗೆ ಈ ನಿಯಮ ಬದಲಾವಣೆ ವಿಚಾರವನ್ನು ಈಗಾಗಲೇ ಎಲ್ಲ ಫ್ರಾಂಚೈಸಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದೆ.
ಐಪಿಎಲ್ಗೂ ಮುನ್ನ ಈ ನಿಯಮವನ್ನು ದಕ್ಷಿಣ ಆಫ್ರಿಕಾದಲ್ಲಿ ಈ ವರ್ಷದಿಂದ ಆರಂಭವಾದ ಎಸ್ಎ ಟಿ20 ಲೀಗ್ನಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಆ ಟೂರ್ನಿಯಲ್ಲಿ ಸಿಕ್ಕ ಯಶಸ್ಸಿನ ಬಳಿಕ ಈ ನಿಯಮವನ್ನು ಇದೀಗ ಐಪಿಎಲ್ನಲ್ಲಿ ಜಾರಿಗೆ ತರಲು ಮಂಡಳಿ ಚಿಂತನೆ ನಡೆಸಿದೆ.
ಇದನ್ನೂ ಓದಿ IPL 2023: ಐಪಿಎಲ್ಗೆ ಎಂಟ್ರಿ ಕೊಡಲಿದ್ದಾರೆ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಜಾರಿಗೆ ತರಲಾದ ನೂತನ ಡಿಆರ್‌ಎಸ್ ನಿಯಮವನ್ನು ಈ ಬಾರಿ ಐಪಿಎಲ್ನಲ್ಲಿಯೂ ಜಾರಿಗೆ ತರಲಾಗಿದೆ. ಇದರಿಂದ ವೈಡ್ ಮತ್ತು ನೋ ಬಾಲ್ ನಿರ್ಧಾರದ ವಿರುದ್ಧವೂ ಡಿಆರ್‌ಎಸ್ ಬಳಸಬಹುದಾಗಿದೆ. ಆದರೆ ಲೆಗ್ ಬೈ ನಿರ್ಧಾರಕ್ಕೆ ಡಿಆರ್‌ಎಸ್ ತೆಗೆದುಕೊಳ್ಳಲು ಅವಕಾಶ ನೀಡಲಾಗಿಲ್ಲ. ಐಪಿಎಲ್ ಟೂರ್ನಿ ಮಾರ್ಚ್ 31ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(Chennai Super kings) ಮತ್ತು ಗುಜರಾತ್ ಟೈಟಾನ್ಸ್(Gujarat Titans) ಮುಖಾಮುಖಿಯಾಗಲಿವೆ. ಈ ಪಂದ್ಯ ಅಹಮದಾಬಾದ್ನಲ್ಲಿ ನಡೆಯಲಿದೆ.