ಮುಂಬಯಿ: ಗುರುವಾರ ರಾತ್ರಿ ನಡೆದ ಐಪಿಎಲ್ನ 47ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ರನ್ಗಳ ರೋಚಕ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಆ್ಯಂಡ್ರೆ ರಸೆಲ್ ನೂತನ ಮೈಲುಗಲ್ಲೊಂದನ್ನು ನಿರ್ಮಿಸಿದ್ದಾರೆ. ಟಿ20 ವೃತ್ತಿಜೀವನದಲ್ಲಿ 600ನೇ ಸಿಕ್ಸರ್‌ಗಳನ್ನು ಪೂರ್ತಿಗೊಳಿಸಿದ ಕೀರ್ತಿಗೆ ಅವರು ಭಾಜನರಾದರು.
ಇಲ್ಲಿನ ರಾಜೀವ್ಗಾಂಧಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಎಸ್ಆರ್ಎಚ್ ತಂಡ ತನ್ನ ಪಾಲಿನ 20 ಓವರ್ಗಳು ಮುಕ್ತಾಯಗೊಂಡಾಗ 8 ವಿಕೆಟ್ ನಷ್ಟಕ್ಕೆ 166 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಹೈದರಾಬಾದ್ ತಂಡದ ಲೆಗ್ ಸ್ಪಿನ್ನರ್ ಮಯಾಂಕ್ ಮಾರ್ಕಾಂಡೆ ಅವರ ಓವರ್ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ರಸೆಲ್ ಅವರು ಟಿ20 ಕ್ರಿಕೆಟ್ ಮಾದರಿಯಲ್ಲಿ 600 ಸಿಕ್ಸರ್ ಪೂರ್ಣಗೊಳಿಸಿದರು. ಈ ಮೂಲಕ ಟಿ20 ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಮೂರನೇ ಆಟಗಾರ ಎನಿಸಿಕೊಂಡರು. ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ (1,056 ಸಿಕ್ಸರ್) ಮೊದಲ ಸ್ಥಾನ ಪಡೆದಿದ್ದಾರೆ. ಕೈರನ್ ಪೊಲಾರ್ಡ್ (812 ಸಿಕ್ಸರ್) ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಾರಸ್ಯವೆಂದರೆ ಮೊದಲ 3 ಆಟಗಾರರು ವಿಂಡೀಸ್ ತಂಡದವರಾಗಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಕಿವೀಸ್ನ ಸ್ಪೋಟಕ ಬ್ಯಾಟರ್ ಬ್ರೆಂಡನ್ ಮೆಕಲಮ್ (485 ಸಿಕ್ಸರ್) ಮತ್ತು ಕಾಲಿನ್ ಮುನ್ರೊ (480 ಸಿಕ್ಸರ್) 5ನೇ ಸ್ಥಾನದಲ್ಲಿದ್ದಾರೆ.
ರಸೆಲ್ ಅವರು ಐಪಿಎಲ್ನಲ್ಲಿ ಇದುವರೆಗೆ 188 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಸಾಧನೆ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದೆ. ಗೇಲ್ 355 ಸಿಕ್ಸರ್ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.