ಮುಂಬಯಿ: ಪಂಜಾಬ್ ಕಿಂಗ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ನ ದ್ವಿತೀಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 13 ರನ್ಗಳ ಸೋಲು ಕಂಡಿದೆ. ಈ ಪಂದ್ಯದಲ್ಲಿ ಆಡಿದ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 31ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್ ಮತ್ತು ಕ್ಯಾಮರೂನ್ ಗ್ರೀನ್ ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಸಣ್ಣ ಅಂತರದಿಂದ ಸೋಲು ಕಂಡಿತು.
ಈ ಪಂದ್ಯದಲ್ಲಿ ಮೂರು ಓವರ್ ಎಸೆತದ ಅರ್ಜುನ್ ತೆಂಡೂಲ್ಕರ್ 48 ರನ್ ನೀಡಿ ಒಂದು ವಿಕೆಟ್ ಪಡೆದರು. ಆದರೆ ಅವರು ತಮ್ಮ ಮೂರನೇ ಓವರ್ನಲ್ಲಿ ಬರೋಬ್ಬರಿ 31 ರನ್ ಬಿಟ್ಟು ಕೊಡುವ ಮೂಲಕ 16ನೇ ಆವೃತ್ತಿಯ ಐಪಿಎಲ್ನಲ್ಲಿ ಒಂದೇ ಓವರ್ನಲ್ಲಿ ಅತ್ಯಧಿಕ ಸ್ಕೋರ್ ಬಿಟ್ಟುಕೊಟ್ಟ ಬೌಲರ್ ಎಂದ ಅಪಕೀರ್ತಿಗೆ ಒಳಗಾದರು. ಜತೆಗೆ ಮುಂಬೈ ಪರ ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್ನಲ್ಲಿ ಅತಿ ಹೆಚ್ಚು ರನ್ ನೀಡಿದ ದ್ವಿತೀಯ ಬೌಲರ್ ಎನಿಸಿಕೊಂಡರು. ಮೊದಲ ಸ್ಥಾನದಲ್ಲಿ ಡೇನಿಯಲ್ ಸ್ಯಾಮ್ಸ್ ಕಾಣಿಸಿಕೊಂಡಿದ್ದಾರೆ. ಅವರು ಕಳೆದ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್ನಲ್ಲಿ 35 ರನ್ ಹೊಡೆಸಿಕೊಂಡಿದ್ದರು. ಇದೀಗ ಈ ಕಳಪೆ ಬೌಲಿಂಗ್ ದಾಖಲೆಯ ಪಟ್ಟಿ ಮತ್ತೊಬ್ಬರಾಗಿ ಅರ್ಜುನ್ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ IPL 2023: ಅರ್ಶ್ದೀಪ್ ಸಿಂಗ್ ಮುರಿದ ಸ್ಟಂಪ್ಗಳ ಬೆಲೆ ಎಷ್ಟು?
ಮೊದಲ ಎಡರು ಓವರ್ನಲ್ಲಿ ಕೇವಲ 17 ರನ್ ನೀಡಿ ಒಂದು ವಿಕೆಟ್ ಪಡೆದಿದ್ದ ಅರ್ಜುನ್ ಅವರು ಮೂರನೇ ಓವರ್ನಲ್ಲಿ ಲಯ ಕಳೆದುಕೊಂಡರು. ಹಂಗಾಮಿ ನಾಯಕ ಸ್ಯಾಮ್ ಕರನ್ ಅವರು ಸತತ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಇಲ್ಲಿ ವಿಚಲಿತರಾದ ಅರ್ಜುನ್ ಬಳಿಕದ ಎಲ್ಲ ಎಸೆತದಲ್ಲಿಯೂ ಸರಿಯಾಗಿ ದಂಟಿಸಿಕೊಂಡರು. ಜತೆಗೆ ಒಂದು ನೋಬಾಲ್ ಕೂಡ ಎಸೆದರು. ಈ ಹಿಂದಿನ ಎರಡು ಪಂದ್ಯಗಳಲ್ಲಿ ಅಮೋಘ ಬೌಲಿಂಗ್ ನಡೆಸಿದ್ದ ಅವರು ತಮ್ಮ ಮೂರನೇ ಪಂದ್ಯದಲ್ಲಿ ಅತ್ಯಂತ ಕಳಪೆ ಬೌಲಿಂಗ್ ನಡೆಸಿ ತಂಡದ ಸೋಲಿಗೆ ಕಾರಣರಾದರು. ಇದೀಗ ಅವರಿಗೆ ಮುಂದಿನ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿದೆಯಾ ಎಂದು ಕಾದು ನೋಡಬೇಕಿದೆ.