ಗುವಾಹಟಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ನ(IPL 2023) 11ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 57 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ನಾಯಕ ಸಂಜು ಸ್ಯಾಮ್ಸನ್(Sanju Samson) ಹಿಡಿದ ಕ್ಯಾಚ್ ಒಂದರ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ(Barsapara Cricket Stadium) ನಡೆದ ಶನಿವಾರದ ಐಪಿಎಲ್ನ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್(60) ಮತ್ತು ಜಾಸ್ ಬಟ್ಲರ್(79) ಅವರ ಸೊಗಸಾದ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಜವಾಬಿತ್ತ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪಾಲಿನ ಆಟದಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿಗೆ ಖಾತೆ ತೆರೆಯುವ ಮುನ್ನವೇ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್(Trent Boult) ಆಘಾತ ನೀಡಿದರು. ಪೃಥ್ವಿ ಶಾ(Prithvi Shaw) ಅವರ ವಿಕೆಟ್ ಕಿತ್ತು ರಾಜಸ್ಥಾನ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಪೃಥ್ವಿ ಶಾ ಅವರ ಈ ಕ್ಯಾಚ್ ಸಂಜು ಸ್ಯಾಮ್ಸನ್ ಸೂಪರ್ ಮ್ಯಾನ್ ರೀತಿ ಹಾರಿ ಹಿಡಿಯುವ ಮೂಲಕ ಒಂದು ಕ್ಷಣ ಎಲ್ಲರನ್ನು ನಿಬ್ಬೆರಗಾಗಿಸುವಂತೆ ಮಾಡಿದರು. ಸಂಜು ಈ ಕ್ಯಾಚ್ ಹಿಡಿಯುತ್ತಿದಂತೆ ಕಾಮೆಂಟ್ರಿಯಲ್ಲಿ “ವಾಟ್ ಎ ಕ್ಯಾಚ್’ (ಎಂತಹ ಅದ್ಭುತ ಕ್ಯಾಚ್) ಎಂದು ಹೇಳಿದರು. ಸದ್ಯ ಈ ಕ್ಯಾಚ್ನ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ IPL 2023: ಹ್ಯಾಟ್ರಿಕ್ ಸೋಲಿಗೆ ತುತ್ತಾದ ಡೆಲ್ಲಿ ಕ್ಯಾಪಿಟಲ್ಸ್; ರಾಜಸ್ಥಾನ್ಗೆ 57 ರನ್ ಗೆಲುವು
ಅರ್ಧಶತಕ ಬಾರಿಸಿ ಮಿಂಚಿದ ಬಟ್ಲರ್, ಜೈಸ್ವಾಲ್
ಮೊದಲೆರಡು ಪಂದ್ಯಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ್ದ ನಾಯಕ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಶೂನ್ಯ ಸಂಕಟಕ್ಕೆ ಸಿಲುಕಿದರು. 4 ಎಸೆತ ಎದುರಿಸಿ ಖಾತೆ ತೆರೆಯುವಲ್ಲಿ ವಿಫಲರಾದರು. ರಾಜಸ್ಥಾನ್ ತಂಡದ ಪರ ಜಾಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಜೋಶ್ನಿಂದಲೇ ಬ್ಯಾಟಿಂಗ್ ನಡೆಸಿ ಡೆಲ್ಲಿ ಬೌಲರ್ಗಳ ಮೇಲೆ ಸವಾರಿ ಮಾಡಿದ್ದರು. ಉಭಯ ಆಟಗಾರರು ಬೌಂಡರಿ ಸಿಕ್ಸರ್ಗಳ ಮಳೆಯನ್ನೇ ಹರಿಸಿದರು. ಜೈಸ್ವಾಲ್ 31 ಎಸೆತಗಳಿಂದ 11 ಬೌಂಡರಿ ಮತ್ತು ಒಂದು ಸಿಕ್ಸರ್ ನರವಿನಿಂದ 60 ರನ್ ಬಾರಿಸಿದರು. ಸಿಡಿಲಬ್ಬರ ಬ್ಯಾಟಿಂಗ್ ನಡೆಸಿದ ಬಟ್ಲರ್ 51 ಎಸೆತಗಳಿಂದ 79 ರನ್ ಬಾರಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಯಿತು.