ಮುಂಬಯಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ತೆಗೆದುಕೊಂಡ ನಿರ್ಧಾರವೊಂದನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹವಾಗ್ ಖಂಡಿಸಿದ್ದಾರೆ.
ಮೋಹಿತ್ ಶರ್ಮ ಅವರ ಅಂತಿಮ ಓವರ್ನಲ್ಲಿ ಚೆನ್ನೈ ತಂಡಕ್ಕೆ 13 ರನ್ಗಳ ಅವಶ್ಯಕತೆ ಇತ್ತು. ಈ ಓವರಿನ ಮೊದಲ ನಾಲ್ಕು ಎಸೆತಗಳಲ್ಲಿ ಮೋಹಿತ್ ಶರ್ಮ ಅವರು ಕೇವಲ ಮೂರು ರನ್ ಬಿಟ್ಟುಕೊಟ್ಟು ಚೆನ್ನೈ ತಂಡವನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದರು. ಇದರಿಂದಾಗಿ ಗುಜರಾತ್ ಗೆಲ್ಲುವ ಆಸೆ ಬಲವಾಗಿತ್ತು. ಆದರೆ ಕೊನೆಯ ಎರಡು ಎಸೆತಗಳಲ್ಲಿ ಜಡೇಜಾ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಚೆನ್ನೈಗೆ ಗೆಲುವು ತಂದು ಕೊಟ್ಟರು.
ಪಂದ್ಯದ ಅಂತಿಮ ಓವರ್ ಗುಜರಾತ್ ಟೈಟನ್ಸ್ನ ಯೋಜನೆಯಂತೆ ನಡೆಯುತ್ತಿತ್ತು. ಆದರೆ ನಾಯಕ ಹಾರ್ದಿಕ್ ಪಾಂಡ್ಯ ಅವರು ಮೋಹಿತ್ ಜತೆಗೆ ಸ್ವಲ್ಪ ಸಮಯ ಮಾತುಕತೆ ನಡೆಸಿದ್ದೇ ತಂಡದ ಸೋಲಿಗೆ ಕಾರಣ ಎಂದು ಸೆಹವಾಗ್ ಹೇಳಿದ್ದಾರೆ. ಮೊದಲ 4 ಎಸೆತಗಳನ್ನು ಉತ್ತಮ ರೀತಿಯಲ್ಲಿ ನಡೆಸಿದ ಅವರಿಗೆ ಅಂತಿಮ ಎಡರು ಎಸೆತಗಳನ್ನು ಹೇಗೆ ಎಸೆಯಬೇಕೆಂದು ತಿಳಿದಿರುತ್ತದೆ. ಆದರೆ ಪಾಂಡ್ಯ ಅವರು ಮಧ್ಯ ಪ್ರವೇಶಿಸಿ ಅವರ ಯೋಜನೆಗೆ ಅಡ್ಡಗಾಲಿಟ್ಟರು ಎಂದು ಸೆಹವಾಗ್ ಹೇಳಿದ್ದಾರೆ.
ಇದನ್ನೂ ಓದಿ IPL 2023 : ಐಪಿಎಲ್ ಟ್ರೋಫಿಗೆ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿಎಸ್ಕೆ
“ಓರ್ವ ಬೌಲರ್ ಚೆನ್ನಾಗಿ ಬೌಲಿಂಗ್ ಮಾಡುವಾಗ ಹಾಗೂ ಯಾರ್ಕರ್‌ಗಳೊಂದಿಗೆ ಸತತ ಎಸೆತ ಎಸೆಯುತ್ತಿರುವಾಗ, ನೀವು ಯಾಕೆ ಹೋಗಿ ಅವರೊಂದಿಗೆ ಮಾತನಾಡುತ್ತೀರಿ? ಬ್ಯಾಟರ್‌ಗೆ 2 ಎಸೆತಗಳಲ್ಲಿ 10 ಬೇಕು ಹಾಗೂ ಆಗ ಯಾರ್ಕರ್ ನೊಂದಿಗೆ ದಾಳಿ ಮಾಡಬೇಕೆಂದು ಅವರಿಗೆ ತಿಳಿದಿದೆ. ಹಾಗಿರುವಾಗ ನೀವು ಅವರ ಸಮಯವನ್ನು ಏಕೆ ವ್ಯರ್ಥ ಮಾಡುತ್ತೀರಿ? ಮೋಹಿತ್ ಎದುರಾಳಿಗೆ ರನ್ ಬಿಟ್ಟುಕೊಡುತ್ತಿದ್ದರೆ ಆಗ ಅವರ ಬಳಿ ಹೋಗಿ ಮಾತನಾಡುವುದರಲ್ಲಿ ಒಂದು ಅರ್ಥವಿದೆ. ಆದರೆ ಇಲ್ಲಿ ಪರಿಸ್ಥಿತಿ ಹಾಗಿರಲಿಲ್ಲ ಆದರೂ ಪಾಂಡ್ಯ ಅವರು ಮೋಹಿತ್ಗೆ ತಲೆ ತಿಂದಿದ್ದಾರೆ. ಇದರಿಂದ ಅವರ ಏಕಾಗ್ರತೆಗೆ ಅಡ್ಡಿಯಾಗಿದೆ ಹೀಗಾಗಿ ಪಂದ್ಯ ಸೋಲು ಕಂಡಿದೆ ಎಂದು ಪಾಂಡ್ಯ ವರ್ತನೆಗೆ ಸೆಹಾವಾಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಹವಾಗ್ ಮಾತ್ರವಲ್ಲದೆ ಸುನಿಲ್ ಗವಾಸ್ಕರ್ ಪಾಂಡ್ಯ ವರ್ತನೆಗೆ ಕಿಡಿಕಾರಿದ್ದರು.