ನವದೆಹಲಿ: 2014ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ ಹಿಂದಿರುವ ಗುಟ್ಟೊಂದನ್ನು ಇದೀಗ ವೀರೇಂದ್ರ ಸೆಹವಾಗ್(Virender Sehwag) ರಟ್ಟು ಮಾಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ನ ಸಂದರ್ಶನವೊಂದರಲ್ಲಿ ಐಪಿಎಲ್ ಬಗ್ಗೆ ಮಾತನಾಡುತ್ತಿದ್ದ ವೇಳೆ ಅವರು ತಮ್ಮ ಈ ಶತಕದ ಹಿಂದಿರುವ ನೋವು ಮತ್ತು ಉದ್ದೇಶವನ್ನು ತಿಳಿಸಿದ್ದಾರೆ.
“ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶತಕ ಗಳಿಸಿದ್ದು ನನಗೆ ಅತ್ಯಂತ ಸ್ಮರಣೀಯ ಕ್ಷಣ. ಆ ಐಪಿಎಲ್ ಆವೃತ್ತಿಯಲ್ಲಿ ನಾನು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ, ನನ್ನ ಮಗ ನನ್ನ ಬಳಿ ಬಂದು, ಅಪ್ಪಾ ನೀವು ರನ್ ಗಳಿಸದೇ ಇರುವುದಕ್ಕೆ ನನ್ನ ಸ್ನೇಹಿತರು ನನ್ನನ್ನು ತಮಾಷೆ ಮಾಡುತ್ತಿದ್ದಾರೆ ಎಂದು ಹೇಳಿದ. ಈ ವೇಳೆ ನನಗೆ ತುಂಬಾ ಬೇಸರವಾಯಿತು. ಮಗನ ಈ ಪ್ರಶ್ನೆಗೆ ಉತ್ತರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ನಾನು ಅಂದು ದೃಢ ನಿರ್ಧಾರವೊಂದನ್ನು ತೆಗೆದುಕೊಂಡೆ. ಮಗನಿಗಾಗಿ ರನ್ ಗಳಿಸಲು ಬಯಸಿದ್ದೆ, ಇದೇ ಹಠಕ್ಕೆ ಅಂದು ಶತಕ ಸಿಡಿಸಿದೆ” ಎಂದು ತಮ್ಮ ಶತಕದ ಹಿಂದಿನ ಉದ್ದೇಶವನ್ನು ಸೆಹವಾಗ್ ಬಿಚ್ಚಿಟ್ಟರು.
ಇದನ್ನೂ ಓದಿ IPL 2023: ಆರ್ಸಿಬಿ ಸೋಲಿಗೆ ಕಾರಣ ತಿಳಿಸಿದ ಜಹೀರ್ ಖಾನ್
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮೊದಲು ಬ್ಯಾಟಿಂಗ್ ನಡೆಸಿದ್ದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್‌ಗಳನ್ನು ಕಲೆಹಾಕಿತ್ತು. ಜಬಾಬಿತ್ತ ಚೆನ್ನೈ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿ 24 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಸೆಹವಾಗ್ 18ನೇ ಓವರ್ ತನಕ ಬ್ಯಾಟಿಂಗ್ ನಡೆಸಿ 58 ಎಸೆತಗಳಲ್ಲಿ 12 ಬೌಂಡರಿ 8 ಭರ್ಜರಿ ಸಿಕ್ಸರ್ ಸಹಿತ 122 ರನ್ ಗಳಿಸಿದರು. ಸದ್ಯ ಸೆಹವಾಗ್ ಅವರು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಐಪಿಎಲ್ ಐಪಿಎಲ್ ಕುರಿತ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.