ಅಹಮದಾಬಾದ್: ಅಸಾಧ್ಯವಾದುದನ್ನು ಸಾಧ್ಯ ಎಂದು ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತೋರಿಸಿಕೊಟ್ಟ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ರಿಂಕ್ ಸಿಂಗ್ ಅವರನ್ನು ತಂಡದ ಮಾಲಿಕ, ಬಾಲಿವುಡ್ ನಟ ಶಾರುಖ್ ಖಾನ್ ಅವರು ಶ್ಲಾಘಿಸಿದ್ದಾರೆ.
ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟನ್ಸ್ ವಿಜಯ್ ಶಂಕರ್ ಅವರ ಅರ್ಧಶತಕದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 204 ರನ್ ಕಲೆ ಹಾಕಿತು. ಬರೋಬ್ಬರಿ 204 ರನ್ ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ ಸ್ಮರಣೀಯ ಜಯ ತನ್ನದಾಗಿಸಿಕೊಂಡಿತು.
ಇದನ್ನೂ ಓದಿ IPL 2023: ಕನ್ನಡಿಗ ರಾಹುಲ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
ಕೊನೆಯ ಓವರ್ನಲ್ಲಿ ರಿಂಕು ಸಿಂಗ್ ಸಿಕ್ಸರ್ಗಳ ಮಳೆ ಸುರಿಸಿ ಪಂದ್ಯದ ದಿಕ್ಕನ್ನೇ ಬದಲಿಸಿ ಕೆಕೆಆರ್ಗೆ ಗೆಲುವು ತಂದಿಟ್ಟರು. ಇದೇ ಸಂತಸದಲ್ಲಿ ತಂಡದ ಮಾಲಿಕ ಶಾರುಖ್ ಅವರು ಟ್ವಿಟರ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ಸು ಕಂಡ ತಮ್ಮ ‘ಪಠಾಣ್’ ಚಿತ್ರದ ಪೋಸ್ಟರ್ ಒಂದನ್ನು ರಿಂಕು ಸಿಂಗ್ ಅವರ ಹೆಸರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಪೋಸ್ಟರ್‌ನಲ್ಲಿ ಪಾತ್ರಧಾರಿ ಶಾರುಖ್ ಖಾನ್ ದೇಹಕ್ಕೆ ರಿಂಕು ಸಿಂಗ್ ಅವರ ತಲೆಯನ್ನು ಎಡಿಟ್ ಮಾಡಲಾಗಿದ್ದು, ‘ಎಂಥಾ ಆವೇಶ ರಿಂಕು!’ ನಿಮ್ಮ ಕ್ರಿಕೆಟ್ ಬಾಳ್ವೆಗೆ ಶುಭವಾಗಲಿ’ ಎಂದು ಶಾರುಖ್ ಬರೆದಿದ್ದಾರೆ. ಶಾರುಖ್ ಅವರ ಹಾರೈಕೆಗೆ ರಿಂಕು ಅವರು ಧನ್ಯವಾದ ತಿಳಿಸಿದ್ದಾರೆ.
ಐಪಿಎಲ್ನಲ್ಲಿ ದಾಖಲೆ ಬರೆದ ರಿಂಕು
ರಿಂಕು ಸಿಂಗ್ ಅವರು ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಐಪಿಎಲ್ (IPL 2022) ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ್ದರ. ತಂಡವೊಂದರ ಗೆಲುವಿಗಾಗಿ ಕೊನೇ ಓವರ್ನಲ್ಲಿ ಸತತವಾಗಿ ಐದು ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಸೃಷ್ಟಿಸಿದ್ದಾರೆ. ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಈ ಪಂದ್ಯದಲ್ಲಿ ಕೊನೇ ಓವರ್ನಲ್ಲಿ ಕೆಕೆಆರ್ ಗೆಲುವಿಗೆ 29 ರನ್ಗಳು ಬೇಕಾಗಿದ್ದವು. ಯಶ್ ದಯಾಳ್ ಎಸೆದ ಮೊದಲ ಎಸೆತದಲ್ಲಿ ಉಮೇಶ್ ಯಾದವ್ ಒಂದು ರನ್ ಗಳಿಸಿದರು. ಉಳಿದ ಐದು ಎಸೆತಗಳಲ್ಲಿ 28 ರನ್ ಬೇಕಾಗಿತ್ತು. ಸ್ಟ್ರೈಕ್ನಲ್ಲಿದ್ದ ರಿಂಕು ಸಿಂಗ್ ಮುಂದಿನ ಐದು ಎಸೆತಗಳಲ್ಲಿ ಸತತವಾಗಿ ಐದು ಸಿಕ್ಸರ್ ಸಿಡಿಸಿ ಕೆಕೆಆರ್ಗೆ ಗೆಲುವು ಸಾರಿದರು.