ಗುವಾಹಟಿ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶೀಖರ್ ಧವನ್ ಅವರು ಐಪಿಎಲ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಐಪಿಎಲ್ನಲ್ಲಿ(IPL 2023) ಅತ್ಯಧಿಕ 50 ಪ್ಲಸ್ ಸ್ಕೋರ್ಗಳಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡರು. ವಿರಾಟ್ ಕೊಹ್ಲಿಯೂ 50 ಬಾರಿ ಫಿಫ್ಟಿ ಪ್ಲಸ್ ರನ್ ಕಲೆಹಾಕಿದ್ದಾರೆ.
ಕೊಹ್ಲಿ 216 ಇನಿಂಗ್ಸ್ ಮೂಲಕ ಈ ಸಾಧನೆ ಮಾಡಿದರೆ, ಶಿಖರ್ ಧವನ್ ಕೇವಲ 207 ಇನಿಂಗ್ಸ್ಗಳಲ್ಲಿ 50 ಬಾರಿ 50+ ಸ್ಕೋರ್ಗಳಿಸಿದ್ದಾರೆ. ಈ ಮೂಲಕ ಕಡಿಮೆ ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದವರಲ್ಲಿ ಶಿಖರ್ ಮೊದಲಿಗರು. ಇನ್ನು ಐಪಿಎಲ್ನಲ್ಲಿ ಅತೀ ಹೆಚ್ಚು ಬಾರಿ 50 ಪ್ಲಸ್ ರನ್ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅಗ್ರಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್ ಐಪಿಎಲ್ನಲ್ಲಿ ಒಟ್ಟು 60 ಬಾರಿ 50 ಪ್ಲಸ್ ಸ್ಕೋರ್ ಗಳಿಸಿದ್ದಾರೆ.
ರೋಚಕ ಗೆಲುವು ಸಾಧಿಸಿದ ಪಂಜಾಬ್
ಗುವಾಹಟಿಯ(Guwahati) ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ(Barsapara Cricket Stadium) ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಪಂಜಾಬ್ ಕಿಂಗ್ಸ್(Punjab Kings) ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 197 ರನ್ ಗಳಿಸಿತು. ಜವಾಬಿತ್ತ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 192 ರನ್ ಗಳಿಸಲಷ್ಟೇ ಶಕ್ತವಾಯಿತು. ಕೇವಲ 5 ರನ್ ಗಳ ಅಂತರದಿಂದ ಸೋಲು ಕಂಡಿತು.
ಚಹಲ್ಗೆ ಚಳಿ ಬಿಡಿಸಿದ ಧವನ್
ಪ್ರಭಾಸಿಮ್ರಾನ್ ಸಿಂಗ್ ವಿಕೆಟ್ ಪತನದ ಬಳಿಕ ಹೊಡಿ ಬಡಿ ಆಟವಾಡಿದ ಶಿಖರ್ ಧವನ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದ ಚಹಲ್ ಅವರಿಗೆ ಧವನ್ ಈ ಪಂದ್ಯದಲ್ಲಿ ಚಳಿ ಬಿಡಿಸಿದರು. ಒಂದೇ ಓವರ್ನಲ್ಲಿ ಸತತ ಎರಡು ಬೌಂಡರಿ ಮತ್ತು ಸಿಕ್ಸರ್ ಚಚ್ಚಿದರು. ಚಹಲ್ ಅವರ ಈ ಓವರ್ನಲ್ಲಿ 18 ರನ್ ಸೋರಿಕೆಯಾಯಿತು.
ಇದನ್ನೂ ಓದಿ IPL 2023: ರಾಯಲ್ಸ್ ಮೇಲೆ ಸವಾರಿ ಮಾಡಿದ ಪಂಜಾಬ್ ಕಿಂಗ್ಸ್; 5 ರನ್ ರೋಚಕ ಗೆಲುವು
ಬೆನ್ನು ಬಿಡದ ಬೇತಾಳನಂತೆ ಕಾಡಿದ ಧವನ್ ಅವರು ಚಹಲ್ ಅವರ ದ್ವಿತೀಯ ಓವರ್ನಲ್ಲಿಯೂ ಬೌಂಡರಿಗಳ ಸುರಿಮಳೆ ಸುರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಧವನ್ ಅವರು ಇದೇ ಓವರ್ನಲ್ಲಿ ಒಂದು ಜೀವದಾನ ಕೂಡ ಪಡೆದರು. ಚಹಲ್ ಅವರೇ ಕ್ಯಾಚ್ ಬಿಟ್ಟು ಈ ಜೀವದಾನ ನೀಡಿದರು. ಧವನ್ ಜತೆ ಜಿತೇಶ್ ಶರ್ಮಾ ಕೂಡ ಸ್ಫೋಟಕ ಆಟಕ್ಕೆ ಒಗ್ಗಿಕೊಂಡರು. 14 ಓವರ್ ಆಗುವ ವೇಳೆ ತಂಡ ಒಂದು ವಿಕೆಟ್ಗೆ 141 ರನ್ ಗಳಿಸಿತು. ಸಂಜು ಸ್ಯಾಮ್ಸನ್ ಅವರ ಬೌಲಿಂಗ್ ಆಯ್ಕೆಯನ್ನು ಬೌಲರ್ಗಳು ಹುಸಿಯಾಗಿಸಿದರು. ಪ್ರತಿ ಓವರ್ಗೆ 10ರಂತೆ ರನ್ ಬಿಟ್ಟು ಕೊಟ್ಟು ದುಬಾರಿಯಾಗಿ ಪರಿಣಮಿಸಿದರು. ಬೌಲ್ಟ್, ಆಸೀಫ್ ಬೌಲಿಂಗ್ ಮರೆತವರಂತೆ ಬೌಲಿಂಗ್ ನಡೆಸಿದರು.
ಧವನ್ ಅವರಿಂದ ಸತತ ಬೌಂಡರಿ ಹೊಡೆಸಿಕೊಂಡು ಬೆಂಡಾಗಿದ್ದ ಚಹಲ್ ಕೊನೆಗೂ ಜಿತೇಶ್ ಶರ್ಮ ರೂಪದಲ್ಲಿ ಒಂದು ವಿಕೆಟ್ ಕಿತ್ತರು. ಜಿತೇಶ್ ಶರ್ಮಾ 16 ಎಸೆತಗಳಿಂದ 27 (2 ಬೌಂಡರಿ, ಒಂದು ಸಿಕ್ಸರ್) ರನ್ ಕೊಡುಗೆ ನೀಡಿದರು. ಧವನ್ ಜತೆಗೂಡಿ 2ನೇ ವಿಕೆಟ್ಗೆ 60 ರನ್ ಜತೆಯಾಟ ನಡೆಸಿದರು. ಬಳಿಕ ಬಂದ ಜಿಂಬಾಬ್ವೆಯ ಹಿರಿಯ ಆಟಗಾರ ಸಿಕಂದರ್ ರಾಜಾ 1 ರನ್ಗೆ ಸೀಮಿತರಾದರು. ಧವನ್ 56 ಎಸೆತಗಳಿಂದ 86 ರನ್ ಬಾರಿಸಿ ಅಜೇಯರಾಗಿ ಉಳಿದರು. ಧವನ್ ಅವರ ಈ ಮನಮೋಹಕ ಇನಿಂಗ್ಸ್ನಲ್ಲಿ 9 ಬೌಂಡರಿ ಮತ್ತು ಮೂರು ಸಿಕ್ಸರ್ ದಾಖಲಾಯಿತು. ರಾಯಲ್ಸ್ ಪರ ಜೇಸನ್ ಹೋಲ್ಡರ್ 29 ರನ್ಗೆ 2 ವಿಕೆಟ್ ಉರುಳಿಸಿದರು.