ಹೈದರಾಬಾದ್: ಆರಂಭದಲ್ಲಿ ಸತತ ಸೋಲು ಕಂಡು ಆ ಬಳಿಕ ಗೆಲುವಿನ ಹಳಿ ಏರಿದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮಂಗಳವಾರದ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಉಭಯ ತಂಡಗಳ ಈ ಕಾದಾಟ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಡೆಯಲಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದಕ್ಕೆ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ಆತ್ಮವಿಶ್ವಾಸ ತುಂಬಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರು ಸಿಡಿಸಿದ ಶತಕವೇ ಇದಕ್ಕೆ ಸಾಕ್ಷಿ. ಸದ್ಯ ಈ ಪಂದ್ಯದಲ್ಲಿಯೂ ತಂಡ ಅವರ ಮೇಲೆ ಹೆಚ್ಚಿನ ಭರವಸೆ ಇರಿಸಿದೆ. ಇವರ ಜತೆಗೆ ನಾಯಕ ಮಾರ್ಕ್ರಮ್, ಕ್ಲಾಸೆನ್ ಕೂಡ ಮಧ್ಯಮ ಕ್ರಮಾಂಕದಲ್ಲಿ ಸಿಡಿದು ನಿಲ್ಲುವ ಕಾರಣದಿಂದ ತಂಡದ ದೊಡ್ಡ ಮೊತ್ತಕ್ಕೇನು ಕೊರತೆಯಾಗದು. ಜತೆಗೆ ಬೌಲಿಂಗ್ನಲ್ಲಿಯೂ ವಿಶ್ವ ದರ್ಜೆಯ ಬೌಲರ್ಗಳು ಈ ತಂಡದಲ್ಲಿದ್ದಾರೆ. ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ವಾಸಿಂಗ್ಟನ್ ಸುಂದರ್ ಹೀಗಿ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಹೀಗಾಗಿ ಮುಂಬೈಗಿಂತ ಹೈದರಾಬಾದ್ ಬಲಿಷ್ಠವಾಗಿ ಗೋಚರಿಸಿದೆ.
ಅವಳಿ ಸಹೋದರರ ಸವಾಲ್
ಈ ಪಂದ್ಯದ ಮತ್ತೊಂದು ವಿಶೇಷವೆಂದರೆ ಅವಳಿ ಸಹೋದರರ ಇಲ್ಲಿ ಕಣ್ಣಕ್ಕಿಳಿಯಲಿದ್ದಾರೆ. ದಕ್ಷಿಣ ಆಫ್ರಿಕಾದ ಡುವಾನ್ ಜಾನ್ಸೆನ್ ಮತ್ತು ಮಾರ್ಕೊ ಜಾನ್ಸೆನ್ ಜೋಡಿಯು ಈ ಬಾರಿಯ ಐಪಿಎಲ್ನಲ್ಲಿ ಕಾಣಿಸಿಕೊಂಡ ಅವಳಿ ಸಹೋದರರು. ಇದೀಗ ಇವರಿಬ್ಬರ ಮುಖಾಮುಖಿಗೆ ವೇದಿಕೆ ಸಿದ್ದವಾಗಿದೆ. ಡುವಾನ್ ಜಾನ್ಸೆನ್ ಮುಂಬೈ ಪರ ಆಡಿದರೆ ಮಾರ್ಕೊ ಜಾನ್ಸೆನ್ ಹೈದರಾಬಾದ್ ಪರ ಆಡಳಿದ್ದಾರೆ.
ಸತತ ಬ್ಯಾಟಿಂಗ್ ವೈಫಲ್ಯದಿಂದ ಬಳಲುತ್ತಿದ್ದ ಸೂರ್ಯಕುಮಾರ್ ಯಾದವ್ ಅವರು ಸದ್ಯ ಫಾರ್ಮ್ಗೆ ಮರಳಿದ್ದಾರೆ. ಕಳೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಅವರು ಮತ್ತೆ ತಮ್ಮ ಹಳೆಯ ಬ್ಯಾಟಿಂಗ್ ಲಯಕ್ಕೆ ಮರಳಿದಂತೆ ಕಂಡುಬಂದಿದೆ. ಈ ಪಂದ್ಯದಲ್ಲಿಯೂ ಅವರು ಸಿಡಿದು ನಿಂತರೆ ಮುಂಬೈಗೆ ಗೆಲ್ಲುವ ಸಾಧ್ಯತೆ ಇದೆ. ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್ ಮತ್ತು ತಿಲಕ್ ವರ್ಮ ಕೂಡ ಭರ್ಜರಿ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮ ಬ್ಯಾಟ್ ಸದ್ದು ಮಾಡುತ್ತಿಲ್ಲ. ಬೌಲಿಂಗ್ ಕೂಡ ಹೇಳಿಕೊಳ್ಳುವಷ್ಟು ಘಾತಕವಾಗಿಲ್ಲ. ಅನುಭವಿ ಜೋಫ್ರ ಆರ್ಚರ್ ತಂಡದಲ್ಲಿದ್ದರು ಅವರು ಗಾಯದಿಂದಾಗಿ ಹೊರಗುಳಿದಿದ್ದಾರೆ.
ರಾಜೀವ್ ಗಾಂಧಿ ಕ್ರೀಡಾಂಗಣ ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ನೆರವಾಗುತ್ತದೆ. ವೇಗಿಗಳಿಗಿಂತ ಇಲ್ಲಿ ಸ್ಪಿನ್ ಹೆಚ್ಚು ಪರಿಣಾಮಕಾರಿಯಾಗಿದೆ. ಕಳೆದ ಪಂದ್ಯದಲ್ಲಿ ಮಯಾಂಕ್ ಮಾರ್ಕಂಡೆ ಪಂಜಾಬ್ ವಿರುದ್ಧ 4 ವಿಕೆಟ್ ಪಡೆದಿದ್ದು ಇದಕ್ಕೆ ಉತ್ತಮ ನಿದರ್ಶನ. ಹೀಗಾಗಿ ಉಭಯ ತಂಡಗಳು ಸ್ಪಿನ್ಗೆ ಹೆಚ್ಚಿನ ಆದ್ಯತೆ ನೀಡಬಹುದು.
ಇದನ್ನೂ ಓದಿ IPL 2023: ಗಂಗೂಲಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್‌ಫಾಲೋ ಮಾಡಿದ ವಿರಾಟ್ ಕೊಹ್ಲಿ!
ಸಂಭಾವ್ಯ ತಂಡ
ಸನ್‌ರೈಸರ್ಸ್ ಹೈದರಾಬಾದ್: ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್ (ನಾಯಕ), ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಉಮ್ರಾನ್ ಮಲಿಕ್, ಟಿ ನಟರಾಜನ್.
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಟಿಮ್ ಡೇವಿಡ್, ನೆಹಾಲ್ ವಧೇರಾ, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಡುವಾನ್ ಜಾನ್ಸೆನ್, ರಿಲೇ ಮೆರೆಡಿತ್.