Site icon Vistara News

IPL 2023: ಡೆಲ್ಲಿಗೆ ಸೋಲಿನ ಶಾಕ್; ಪ್ಲೇ ಆಫ್​ ಸನಿಹಕ್ಕೆ ಚೆನ್ನೈ ಸೂಪರ್​ ಕಿಂಗ್ಸ್​

MA Chidambaram Stadium At Chennai

ಚೆನ್ನೈ: ಪ್ರಸಕ್ತ ಆವೃತ್ತಿಯ ಐಪಿಎಲ್​ನಲ್ಲಿ ಇದೇ ಮೊದಲ ಬಾರಿ ಮುಖಾಮುಖಿಯಾದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಮಾಜಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 27 ರನ್​ಗಳ ಗೆಲುವು ದಾಖಲಿಸಿದೆ. ಚೆನ್ನೈ ಈ ಗೆಲುವಿನೊಂದಿಗೆ 15 ಅಂಕ ಸಂಪಾದಿಸಿ ಪ್ಲೇ ಆಫ್​ ಸನಿಹಕ್ಕೆ ಬಂದು ನಿಂತಿದೆ. ಸೋಲು ಕಂಡ ಡೆಲ್ಲಿ, ಈ ರೇಸ್​ನಿಂದ ಬಹುತೇಕ ಹೊರಬಿದ್ದಂತಾಗಿದೆ.

ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಚೆನ್ನೈ ಸೂಪರ್​ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 167 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ ತನ್ನ ಪಾಲಿನ ಆಟದಲ್ಲಿ 8 ವಿಕೆಟ್​ ಕಳೆದುಕೊಂಡು 140 ರನ್​ ಗಳಿಸಿ ಶರಣಾಯಿತು.

ಗುರಿ ಬೆನ್ನಟಿದ ಡೆಲ್ಲಿಗೆ ದೀಪಕ್​ ಚಹರ್​ ಆರಂಭದಲ್ಲೇ ದೊಡ್ಡ ಆಘಾತವಿಕ್ಕಿದರು. ಡೇಂಜರಸ್​ ಡೇವಿಡ್​ ವಾರ್ನರ್​ ವಿಕೆಟ್​ ಕಿತ್ತು ಚೆನ್ನೈಗೆ ಮುನ್ನಡೆ ತಂದುಕೊಟ್ಟರು. ಇದರ ಬೆನ್ನಲ್ಲೇ ಮತ್ತೊಂದು ತುದಿಯಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸುತ್ತಿದ್ದ ಫಿಲಿಪ್​ ಸಾಲ್ಟ್​ ಅವರ ವಿಕೆಟ್ ಕೂಡ 19 ರನ್​ಗಳ ಅಂತರದಲ್ಲಿ ಕೆಡವಿದರು. ಆರಂಭಿ ಆಘಾತ ಕಂಡ ಡೆಲ್ಲಿಗೆ ಮಿಚೆಲ್​ ಮಾರ್ಷ್​ ಅವರು ಆಸರೆಯಾಗುವ ಯೋಜನೆಯಲ್ಲಿದ್ದರು. ಆದರೆ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದ ಕನ್ನಡಿಗ ಮನೀಷ್​ ಪಾಂಡೆ ಅವರು ಇಲ್ಲದ ರನ್​ ಕದಿಯುವ ಯತ್ನದಲ್ಲಿ ​ಮಾರ್ಷ್ ಅವರನ್ನು ರನೌಟ್​ ಮಾಡಿದರು. ಇದು ಡೆಲ್ಲಿಗೆಯ ಹಿನ್ನಡೆಗೆ ಮತ್ತಷ್ಟು ಇಂಪ್ಯಾಕ್ಟ್​​ ಮಾಡಿತು.

ಮಾರ್ಷ್​ ಅವರನ್ನು ರನೌಟ್​ ಮಾಡಿದರೂ ಕೆಲ ಕಾಲ ಕ್ರಿಸ್​ ಕಚ್ಚಿ ನಿಂತು ಹೋರಾಟ ನಡೆಸಿದ ಮನೀಷ್​ ಪಾಂಡೆ 2 ಸಿಕ್ಸರ್​ ಮತ್ತು ಒಂದು ಬೌಂಡರಿ ನರವಿನಿಂದ 27 ರನ್​ಗಳ ಕೊಡುಗೆ ನೀಡಿದರು. ಅವರ ಜತೆ ಉತ್ತಮ ಬ್ಯಾಟಿಂಗ್​ ನಡೆಸುತ್ತಿದ್ದ ರಿಲೀ ರೊಸೊ 35 ರನ್​ ಚಚ್ಚಿ ರವೀಂದ್ರ ಜಡೇಜಾಗೆ ವಿಕೆಟ್​ ಒಪ್ಪಿಸಿದರು. ಅಂತಿಮ ಹಂತದಲ್ಲಿ ಅಕ್ಷರ್​ ಪಟೇಲ್​ (21) ಮತ್ತು ರಿಪ್ಪಲ್​ ಪಟೇಲ್​ ಶಕ್ತಿ ಮೀರಿ ಪ್ರಯತ್ನಪಟ್ಟರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಚೆನ್ನೈ ಪರ ಮತೀಶ ಪತಿರಣ 37 ರನ್​ಗೆ ಮೂರು ವಿಕೆಟ್​ ಕಿತ್ತರು.

ಆರಂಭಿಕ ಆಘಾತ ಕಂಡ ಚೆನ್ನೈ

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಚೆನ್ನೈ ತಂಡ ಈ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಯಿತು. ಋತುರಾಜ್​ ಗಾಯಕ್ವಾಡ್​(24), ಡೆವೋನ್​ ಕಾನ್ವೆ(10), ಅಜಿಂಕ್ಯ ರಹಾನೆ(21) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ ಸೇರಿದರು. ಆರಂಭಿಕರಿಬ್ಬರ ವಿಕೆಟ್​ ಅಕ್ಷರ್​ ಪಟೇಲ್​ ಪಾಲಾದರೆ, ರಹಾನೆ ವಿಕೆಟ್​ ಕುಲ್​ದೀಪ್​ ಕಿತ್ತರು. ಅರ್ಧದಾರಿ ಕ್ರಮಿಸುವ ವೇಳೆಗೆ ಚೆನ್ನೈ ಶೋಚನೀಯ ಸ್ಥಿತಿಗೆ ತಲುಪಿತು. ಮೊಯಿನ್​ ಅಲಿ ಕೂಡ 7 ರನ್​ಗೆ ಆಟ ಮುಗಿಸಿದರು.

ಇದನ್ನೂ ಓದಿ IPL 2023: ‘ಸಿಹಿ ಮಾವಿನ ಹಣ್ಣಿಗೆ’ ಟಾಂಗ್​ ಕೊಟ್ಟ ವಿರಾಟ್​ ಕೊಹ್ಲಿ

ಶಿವಂ ದುಬೆ ಅವರು ಬಡಬಡನೆ ಮೂರು ಸಿಕ್ಸರ್​ ಸಿಡಿಸುವ ಮೂಲಕ ಅಪಾಯಕಾರಿಯಾಗುವ ಸೂಚನೆ ನೀಡಿದರೂ ಅವರ ಈ ಆಟ ಹೆಚ್ಚು ಹೊತ್ತು ಸಾಗಲಿಲ್ಲ. 12 ಎಸೆತಗಳಲ್ಲಿ 25 ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ವೃತ್ತಿಜೀವನದ 200ನೇ ಐಪಿಎಲ್​ ಪಂದ್ಯದಲ್ಲಿ ಆಡಲಿಳಿದ ಅಂಬಾಟಿ ರಾಯುಡು ಅವರು ಕೆಳ ಕ್ರಮಾಂಕದಲ್ಲಿ ಸಣ್ಣ ಮಟ್ಟದ ಬ್ಯಾಟಿಂಗ್ ಹೋರಾಟ​ ನಡೆಸುವ ಮೂಲಕ 23 ರನ್​ ಗಳಿಸಿದರು. ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಮತ್ತು ನಾಯಕ ಎಂ.ಎಸ್​ ಧೋನಿ ಅವರು ಬಿರುಸಿನ ಬ್ಯಾಟಿಂಗ್​ ನಡೆಸಿದ ಪರಿಣಾಮ ಚೆನ್ನೈ 150 ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

17 ಓವರ್​ ತನಕ ಉತ್ತಮ ಬೌಲಿಂಗ್​ ಕಾಯ್ದುಕೊಂಡಿದ್ದ ಡೆಲ್ಲಿ ಬೌಲರ್​ಗಳಿಗೆ ಧೋನಿ ಮತ್ತು ಜಡೇಜಾ ಸೇರಿಕೊಂಡು ಸಿಕ್ಸರ್​ ಮತ್ತು ಬೌಂಡರಿ ರುಚಿ ತೋರಿಸಿದರು. ಜಡೇಜಾ 21 ರನ್​ ಗಳಿಸಿದರೆ, ಧೋನಿ ಅವರು 9 ಎಸೆತಗಳಲ್ಲಿ 20 ರನ್​ ಬಾರಿಸಿದರು. ಡೆಲ್ಲಿ ಪರ ಮಿಚೆಲ್​ ಮಾರ್ಷ್​ ಅವರು ಮೂರು ಓವರ್​ ಬೌಲಿಂಗ್​ ನಡೆಸಿ ಕೇವಲ 18 ರನ್​ ವೆಚ್ಚದಲ್ಲಿ ಮೂರು ವಿಕೆಟ್​ ಉಡಾಯಿಸಿದರು. ಉಳಿದಂತೆ ಅಕ್ಷರ್​ ಪಟೇಲ್​ 2 ವಿಕೆಟ್​ ಪಡೆದರು.

ಪಂದ್ಯ ವೀಕ್ಷಿಸಿದ ಬೊಮ್ಮನ್-ಬೆಳ್ಳಿ ದಂಪತಿ

ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ʻದಿ ಎಲಿಫೆಂಟ್ ವಿಸ್ಪರರ್ಸ್‌ʼ (The Elephant Whisperers)ನಲ್ಲಿ ನಟಿಸಿದ ಸ್ಥಳೀಯ ದಂಪತಿ ಬೊಮ್ಮನ್(Bomman) ಮತ್ತು ಬೆಳ್ಳಿ(Bellie) ಅವರು ಈ ಪಂದ್ಯಕ್ಕೆ ಸಾಕ್ಷಿಯಾದರು. ಜತೆಗೆ ಈ ಸಾಕ್ಷ್ಯಚಿತ್ರದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಕೂಡ ಉಪಸ್ಥಿತರಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಈ ಮೂವರು ಅತಿಥಿಗಳಿಗೆ ಚೆನ್ನೈ ಸೂಪರ್​ ಕಿಂಗ್ಸ್​ ಪರವಾಗಿ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ತಂಡದ ಜೆರ್ಸಿಯನ್ನು ನೀಡಿ ಗೌರವಿಸಿದರು. ಸ್ಮರಣಿಕೆ ನೀಡಿದ ಬಳಿಕ ಧೋನಿ ಕೆಲ ಕಾಲ ಈ ದಂಪತಿಗಳೊಂದಿಗೆ ಕುಶಲೋಪರಿ ನಡೆಸಿದರು.

Exit mobile version