ಬೆಂಗಳೂರು: ಕಳೆದ 15 ಆವೃತ್ತಿಯ ಐಪಿಎಲ್ನಲ್ಲಿ ಈ ಸಲ ಕಪ್ ನಮ್ದೇ ಎಂದು ಹೇಳುತ್ತಲೇ ಬಂದಿರುವ ಆರ್ಸಿಬಿ(RCB) ಒಂದು ಬಾರಿಯೂ ಕಪ್ ಗೆಲ್ಲುವಲ್ಲಿ ಯಶಸ್ಸು ಕಂಡಿಲ್ಲ. ಈ ಬಾರಿಯಾದರೂ ಕಪ್ ಗೆಲ್ಲಬೇಕೆಂದಿದ್ದ ಆರ್ಸಿಬಿಗೆ ಗಾಯದ ಸಮಸ್ಯೆಯೊಂದು ಅಡ್ಡಿಯಾದಂತೆ ತೋರುತ್ತಿದೆ. ಆರ್ಸಿಬಿ ತನ್ನ ಐಪಿಎಲ್ ಅಭಿಯಾನವನ್ನು ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಆರಂಭಿಸಲಿದೆ. ಆದರೆ ಈ ಪಂದ್ಯಕ್ಕೆ ಸ್ಟಾರ್ ಆಟಗಾರರಿಬ್ಬರು ಅಲಭ್ಯರಾಗಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.
ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್(Glenn Maxwell) ಮತ್ತು ಜೋಶ್ ಹ್ಯಾಜಲ್ವುಡ್(Josh Hazlewood) ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮ್ಯಾಕ್ಸ್ವೆಲ್ ಅವರು ಮೊಣಕಾಲಿನ ಗಾಯದಿಂದ ಸಂಪೂರ್ಣವಾಗಿ ಚೇತರಿಕೆ ಕಾಣದ ಹಿನ್ನಲೆ ಅವರು ಮುಂಬೈ ವಿರುದ್ಧ ಆಡುವುದಿಲ್ಲ ಎಂದು ತಂಡದ ಮೂಲಗಳು ತಿಳಿಸಿವೆ.
ಇದನ್ನೂ ಓದಿ IPL 2023: ಕ್ರಿಕೆಟ್, ಆಹಾರ ಬಿಟ್ಟಿರಲು ಸಾಧ್ಯವಿಲ್ಲ; ಪಂತ್ ಹೀಗೆ ಹೇಳಿದ್ದು ಏಕೆ?
ಗಾಯದಿಂದ ಸಂಪೂರ್ಣವಾಗಿ ಚೇತರಿಕೆ ಕಾಣದ ವಿಚಾರವನ್ನು ಕೆಳ ದಿನಗಳ ಹಿಂದೆ ಸ್ವತಃ ಮ್ಯಾಕ್ಸ್ವೆಲ್ ಅವರೇ ಬಹಿರಂಗ ಪಡಿಸಿದ್ದರು. ನನ್ನ ಮೊಣಕಾಲಿನ ಗಾಯ ಇನ್ನೂ ವಾಸಿಯಾಗಿಲ್ಲ. ನನ್ನ ಕೈಲಾದಷ್ಟು ಉತ್ತಮ ಪ್ರದರ್ಶನ ತೋರಲಿದ್ದೇನೆ ಎಂದು ಹೇಳಿದ್ದರು. ಅವರ ಈ ಹೇಳಿಕೆಯಿಂದ ಅದಾಗಲೇ ಆರ್ಸಿಬಿಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಕಳೆದ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಮ್ಯಾಕ್ಸ್ವೆಲ್ ಆ ಬಳಿಕದ 2 ಪಂದ್ಯಗಳಿಂದ ಹೊರಗುಳಿದಿದ್ದರು. ಇನ್ನೊಂದೆಡೆ ವಿಶ್ವದ ನಂ.1 ಬೌಲರ್ ಜೋಶ್ ಹ್ಯಾಜಲ್ವುಡ್ ಅವರು ಆರಂಭಿಕ ಪಂದ್ಯ ಮಾತ್ರವಲ್ಲದೆ ಇನ್ನೂ ಕೆಲ ಪಂದ್ಯಗಳಲ್ಲಿ ಆರ್ಸಿಬಿ ಪರ ಕಣಕ್ಕಿಳಿಯುವುದು ಅನುಮಾನ ಎಂದು ಆಸ್ಟ್ರೇಲಿಯಾ ಆಯ್ಕೆ ಸಮಿತಿಯ ಮುಖ್ಯಸ್ಥ ಜಾರ್ಜ್ ಬೈಲಿ ಹೇಳಿದ್ದಾರೆ.
ಇದನ್ನೂ ಓದಿ IPL 2023: ಐಪಿಎಲ್ನಲ್ಲಿ ದಾಖಲೆ ಬರೆಯಲು ಸಜ್ಜಾದ ಮಹೇಂದ್ರ ಸಿಂಗ್ ಧೋನಿ
ಇನ್ನೊಂದೆಡೆ ಮುಂಬೈ ತಂಡಕ್ಕೂ ಗಾಯದ ಸಮಸ್ಯೆ ಕಾಡಿದೆ. ಕ್ಯಾಮರೂನ್ ಗ್ರೀನ್ ಮತ್ತು ಅರ್ಜುನ್ ತೆಂಡೂಲ್ಕರ್ ಅವರು ಗಾಯದ ಸಮಸ್ಯೆಯಿಂದ ಚೇತರಿಕೆ ಕಾಣುತ್ತಿದ್ದಾರೆ. ಕ್ಯಾಮರೂನ್ ಗ್ರೀನ್ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಆಡಿದರೂ ಬೌಲಿಂಗ್ ನಡೆಸುವುದು ಅನುಮಾನ ಎನ್ನಲಾಗಿದೆ. ಆದರೆ ಅರ್ಜುನ್ ಈ ಋತುವಿನ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ಮುಖ್ಯ ಕೋಚ್ ಮಾರ್ಕ್ ಬೌಚರ್ ಈಗಾಗಲೇ ಖಚಿತಪಡಿಸಿದ್ದಾರೆ. ಒಟ್ಟಾರೆ ಎಲ್ಲ ತಂಡಗಳಲ್ಲಿಯೂ ಗಾಯದ ಸಮಸ್ಯೆ ಎದ್ದು ಕಾಣುತ್ತಿದೆ.