ಅಹಮದಾಬಾದ್: ಟೀಮ್ ಇಂಡಿಯಾದ ಯುವ ಆಟಗಾರ, ಗುಜತಾರ್ ಟೈಟನ್ಸ್ ತಂಡದ ಶುಭಮನ್ ಗಿಲ್ ಅವರು ಮುಂಬೈ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಶತಕ ಬಾರಿಸಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಶುಭಮನ್ ಗಿಲ್ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್ 18.2 ಓವರ್ಗಳಲ್ಲಿ 171 ರನ್ ಗಳಿಸಿ ಸರ್ವಪತನ ಕಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಪರ ಶುಭಮನ್ ಗಿಲ್ ಅವರು ಆರಂಭದಲ್ಲಿ ನಿಧಾನಗತಿಯ ಆಟಕ್ಕೆ ಒತ್ತು ಕೊಟ್ಟರೂ ಆ ಬಳಿಕ ಬಿರುಸಿನ ಬ್ಯಾಟಿಂಗ್ ಮೂಲಕ ಶತಕ ಬಾರಿಸಿ ಮಿಂಚಿದರು. ಕೇವಲ 49 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ ಗಿಲ್ ಒಟ್ಟು 60 ಎಸೆತ ಎದುರಿಸಿದ ಬರೊಬ್ಬರಿ 10 ಸಿಕ್ಸರ್ ಮತ್ತು 7 ಬೌಂಡರಿ ನೆರವಿನಿಂದ 129 ರನ್ ಗಳಿಸಿದರು. ಇದೇ ವೇಳೆ ಅವರು ವಿರೇಂದ್ರ ಸೆಹವಾಗ್ ಅವರ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದರು. ಐಪಿಎಲ್ನ ಪ್ಲೇ ಆಫ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಅತಿ ವೇಗದ ಶತಕ ದಾಖಲಿಸಿದ ಆಟಗಾರನಾಗಿ ಮೂಡಿಬಂದರು. ಸೆಹವಾಗ್ ಅವರು 122 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ ಇದೀಗ ಗಿಲ್ 129 ರನ್ ಬಾರಿಸುವ ಮೂಲಕ ಸೆಹವಾಗ್ ಅವರ ದಾಖಲೆಯನ್ನು ಹಿಂದಿಕ್ಕಿದರು.
ಐಪಿಎಲ್ ಪ್ಲೇಆಫ್‌ನಲ್ಲಿ ಶತಕ ಬಾರಿಸಿದ ಟಾಪ್5 ಆಟಗಾರರರು
ಶುಭಮನ್ ಗಿಲ್- 129 ರನ್(2023)
ವೀರೇಂದ್ರ ಸೆಹವಾಗ್- 122 ರನ್ (2014)
ವೃದ್ಧಿಮಾನ್ ಸಹಾ-115 ರನ್ (2014)
ಮುರಳಿ ವಿಜಯ್- 113 ರನ್ (2012)
ರಜತ್ ಪಾಟಿದಾರ್- 112 ರನ್ (2022)
ಇದನ್ನೂ ಓದಿ IPL 2023: ಮತ್ತೆ ಕಪ್ ಗೆಲ್ಲುವುದೇ ಗುಜರಾತ್; ತಂಡ ನಡೆದು ಬಂದ ಹಾದಿ ಹೇಗಿದೆ?
ಆರೆಂಜ್ ಕ್ಯಾಪ್ ಪಡೆದ ಗಿಲ್
ಈ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮಿಂಚಿದ ಶುಭಮನ್ ಗಿಲ್ ಈ ಬಾರಿಯ ಐಪಿಎಲ್ನ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡರು. ಈ ಮೂಲಕ 730 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದ ಡು ಪ್ಲೆಸಿಸ್ ಇದೀಗ ದ್ವಿತೀಯ ಸ್ಥಾನಕ್ಕೆ ಜಾರಿದರು. ಸದ್ಯ ಗಿಲ್ ಅವರು 851 ರನ್ ಬಾರಿಸಿದ್ದಾರೆ. ಆರ್ಸಿಬಿ ತಂಡ ಸೋತು ಹೊರ ಬಿದ್ದ ಕಾರಣ ಡು ಪ್ಲೆಸಿಸ್ಗೆ ಇನ್ನು ಗಿಲ್ ದಾಖಲೆ ಮುರಿಯುವ ಅವಕಾಶವಿಲ್ಲ. ಸದ್ಯ ಈ ರೇಸ್ನಲ್ಲಿರುವ ಆಟಗಾರನೆಂದರೆ ಚೆನ್ನೈ ತಂಡದ ಡೆವೋನ್ ಕಾನ್ವೆ. 15 ಪಂದ್ಯ ಆಡಿರುವ ಅವರು 625 ರನ್ ಬಾರಿಸಿದ್ದಾರೆ. ಫೈನಲ್ ಪಂದ್ಯ ಬಾಕಿ ಇದ್ದರೂ ಅವರಿಗೆ ಈ ಮೊತ್ತವನ್ನು ಗಳಿಸಲು ಅಸಾಧ್ಯ.