ಅಹಮದಾಬಾದ್: 16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ಗಳ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಶುಭಮನ್ ಗಿಲ್(shubman gill) ಬಾರಿಸಿದ ಹೆಲಿಕಾಪ್ಟರ್ ಶಾಟ್ ಸಿಕ್ಸರ್ನ(helicopter six) ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶುಕ್ರವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಈ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ 19.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿ ಜಯ ಸಾಧಿಸಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಗುಜರಾತ್ ಟೈಟಾನ್ಸ್ ತಂಡ 37 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ವೃದ್ಧಿಮಾನ್ ಸಾಹ 25 ರನ್ ಬಾರಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಸಾಯಿ ಸುದರ್ಶನ್ 22 ರನ್ ಬಾರಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 8 ರನ್ಗೆ ಔಟಾಗುವ ಮೂಲಕ ತಂಡಕ್ಕೆ ಹಿನ್ನಡೆ ಉಂಟಾಯಿತು. ಆದರೆ, ಕೊನೇ ಹಂತದಲ್ಲಿ ವಿಜಯ್ ಶಂಕರ್ (27), ರಾಹುಲ್ ತೆವತಿಯಾ (15) ಹಾಗೂ ರಶೀದ್ ಖಾನ್ (10) ತಂಡವನ್ನು ಗೆಲ್ಲಿಸಿದರು.
ಶುಭ್‌ಮನ್ ಗಿಲ್ ಕೇವಲ 36 ಎಸೆತಗಳಿಂದ 63 ರನ್ ಗಳಿಸಿ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು. ಆರು ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ್ದರು. ಇದರಲ್ಲಿ ಒಂದು ಸಿಕ್ಸರ್ ಹೆಲಿಕಾಪ್ಟರ್ ಶಾಟ್ ಮೂಲಕ ಬಾರಿಸಿ ಎಲ್ಲರ ಗಮನ ಸೆಳೆದರು. ಅದರಲ್ಲೂ ಧೋನಿ(ms dhoni) ಅವರು ಕ್ರಿಕೆಟ್ ಲೋಕಕ್ಕೆ ಪರಿಚಯಿಸಿ ಈ ಹೆಲಿಕಾಪ್ಟರ್ ಶಾಟ್ ಹೊಡೆತವನ್ನು ಧೋನಿ ಮುಂದೆಯೇ ಬಾರಿಸಿದ್ದು ಈ ಪಂದ್ಯದ ವಿಶೇಷವಾಗಿತ್ತು.