ಬೆಂಗಳೂರು: ರಾಜಕೀಯ ಒತ್ತಡದ ಮಧ್ಯೆಯೂ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಸಿದ್ದರಾಮಯ್ಯ(siddaramaiah) ಅವರು ಗುರುವಾರ ನಡೆದ ಆರ್‌ಸಿಬಿ ಮತ್ತು ಹೈದರಾಬಾದ್ ವಿರುದ್ಧದ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸಿದ್ದಾರೆ. ಸಿದ್ದು ಅವರು ಪಂದ್ಯ ವೀಕ್ಷಿಸುತ್ತಿರುವ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ ಹೆನ್ರಿಕ್ ಕ್ಲಾಸೆನ್ ಅವರ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ ವಿರಾಟ್ ಕೊಹ್ಲಿಯ ಶತಕ ಮತ್ತು ಡು ಪ್ಲೆಸಿಸ್ ಅವರ ಅರ್ಧಶತಕದ ನೆರವಿನಿಂದ 19.2 ಓವರ್ಗಳಲ್ಲಿ 187 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಸದ್ಯ ಆರ್‌ಸಿಬಿ 14 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಅತ್ಯಂತ ರೋಚಕವಾಗಿ ಸಾಗಿದ ಈ ಪಂದ್ಯವನ್ನು ಸಿದ್ದರಾಮಯ್ಯ ಅವರು ತಮ್ಮ ಆಪ್ತರೊಂದಿಗೆ ಪಂದ್ಯವನ್ನು ವೀಕ್ಷಿಸಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಕಂಡು ಸಂತಸಗೊಂಡಿದ್ದಾರೆ. ಆರ್‌ಸಿಬಿ ತಂಡಕ್ಕೆ ಸಿದ್ದರಾಮಯ್ಯ ಬೆಂಬಲ ಸೂಚಿಸುತ್ತಿರುವುದು ಇದೇ ಮೊದಲೇನಲ್ಲ. ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮುಂಬೈ ವಿರುದ್ಧ ಪಂದ್ಯವನ್ನಾಡಿತ್ತು. ಈ ಪಂದ್ಯಕ್ಕೆ ಸಿದ್ದರಾಮಯ್ಯ ಕೂಡ ಸ್ಟೇಡಿಯಂಗೆ ಆಗಮಿಸಿ ಆರ್‌ಸಿಬಿ ಬೆಂಬಲ ಸೂಚಿಸಿದ್ದರು.
ಇದನ್ನೂ ಓದಿ IPL 2023: ವಿರಾಟ್ ಕೊಹ್ಲಿಯ ಐಪಿಎಲ್ ಶತಕದಲ್ಲೊಂದು ಸ್ವಾರಸ್ಯ; ಏನದು?
ಆರ್‌ಸಿಬಿ ನೆಚ್ಚಿನ ತಂಡ; ಕಪ್ ಗೆಲ್ಲುವ ವಿಶ್ವಾಸವಿದೆ
ಸಿದ್ದರಾಯಮ್ಯ ಅವರಿಗೆ ಕ್ರಿಕೆಟ್ ಅಂದರೆ ಅಚ್ಚುಮೆಚ್ಚು ಎಂದು ಈ ಹಿಂದೆ ಹೇಳಿದ್ದರು. “ಕ್ರಿಕೆಟ್ ನನ್ನ ಇಷ್ಟದ ಆಟ, ಆರ್‌ಸಿಬಿ ನನ್ನ ಹೆಮ್ಮೆಯ ತಂಡ.. ನನ್ನಂತಹ ಕೋಟ್ಯಂತರ ಅಭಿಮಾನಿಗಳ ಹಾರೈಕೆ ಆರ್.ಸಿ.ಬಿ ಹುಡುಗರ ಜತೆಗಿದೆ.. ಇಂದಲ್ಲ ನಾಳೆ ನಮ್ಮವರೂ ಕಪ್ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಓರ್ವ ಕನ್ನಡಿಗನಾಗಿ ನನ್ನ ಬೆಂಬಲ ಯಾವಾಗಲೂ ನಮ್ಮ ಆರ್‌ಸಿಬಿಗೆ ತಂಡಕ್ಕೆ” ಎಂದು ಟ್ವೀಟ್ ಮೂಲಕ ಆರ್‌ಸಿಬಿ ತಂಡಕ್ಕೆ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದರು. ಸಿದ್ದರಾಮಯ್ಯ ಅವರ ಭವಿಷ್ಯದಂತೆ ಆರ್‌ಸಿಬಿ ಈ ಬಾರಿ ಕಪ್ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ.