Site icon Vistara News

IPL 2023: ನಿಧಾನಗತಿ ಬೌಲಿಂಗ್​: ವಿರಾಟ್​ ಕೊಹ್ಲಿಗೆ 24 ಲಕ್ಷ ರೂ. ದಂಡ

Virat Kohli WTC Final 2023

ಬೆಂಗಳೂರು: ಕಳೆದ ಭಾನುವಾರ ನಡೆದ ಐಪಿಎಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್​ ನಡೆಸಿದ್ದಕ್ಕಾಗಿ ಆರ್​ಸಿಬಿ ತಂಡದ ಹಂಗಾಮಿ ನಾಯಕ ವಿರಾಟ್ ಕೊಹ್ಲಿಗೆ ಭಾರಿ ದಂಡ ವಿಧಿಸಲಾಗಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್​ ರಾಯಲ್ಸ್​ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 182 ರನ್​ ಗಳಿಸಿ ಸಣ್ಣ ಅಂತರದಿಂದ ಸೋಲು ಕಂಡಿತ್ತು.

ಪಂದ್ಯದಲ್ಲಿ ನಿಗದಿತ ಸಮಯಕ್ಕಿಂತಲೂ ಹೆಚ್ಚು ಅವಧಿ ತೆಗೆದುಕೊಂಡು ಬೌಲಿಂಗ್​ ನಡೆಸಿದ್ದಕ್ಕಾಗಿ ಇದೀಗ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ವಿರಾಟ್​ ಕೊಹ್ಲಿಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ.ಇದರ ಜತೆಗೆ ಬದಲಿ ಆಟಗಾರ ಸೇರಿದಂತೆ ತಂಡದ ಹನ್ನೊಂದು ಆಟಗಾರರಿಗೆ 6 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದು ಪಂದ್ಯ ಶುಲ್ಕದ ಶೇಕಡಾ 25 ರಷ್ಟು ಆಗಿದೆ. ಇನ್ನು ಐಪಿಎಲ್​ನ ಕೋಡ್​ ಆಫ್​ ಕಂಡಕ್ಟ್​ ಅಪರಾಧವನ್ನು ಕೊಹ್ಲಿ​​ ಒಪ್ಪಿಕೊಂಡಿದ್ದಾರೆ. ಇದನ್ನು ಉಲ್ಲಂಸಿದರೆ, ಪಂದ್ಯದ ರೆಫ್ರಿ ನಿರ್ಧಾರವು ಅಂತಿಮ ಮತ್ತು ಅದಕ್ಕೆ ಆಟಗಾರರು ಬದ್ಧರಾಗಿರಬೇಕಾಗಿದೆ ಎಂದು ಐಪಿಎಲ್‌ ಹೇಳಿಕೆ ತಿಳಿಸಿದೆ.

ಸ್ಲೋ ಓವರ್​ ರೇಟ್​ ನಿಯಮದ ಪ್ರಕಾರ ಮೊದಲ ತಪ್ಪಿಗೆ ನಾಯಕನನ್ನು ದೋಷಿಯನ್ನಾಗಿ ಮಾಡಲಾಗುತ್ತದೆ. ಮೊದಲ ಬಾರಿಯ ತಪ್ಪಿಗೆ 12 ಲಕ್ಷ ರೂ. ದಂಡ ಹಾಕಲಾಗುತ್ತದೆ. ಇದು ಪುನರಾವರ್ತನೆಯಾದಲ್ಲಿ 24 ಲಕ್ಷ ರೂ. ದಂಡ ನಿಗದಿ ಮಾಡಲಾಗಿದೆ. ಅಲ್ಲದೆ ತಂಡದ ಇತರೆ ಆಟಗಾರರು ಪಂದ್ಯದ ಶುಲ್ಕದ ಶೇ.25 ರಷ್ಟು ಮೊತ್ತವನ್ನು ದಂಡವಾಗಿ ನೀಡಬೇಕು. ಒಂದೊಮ್ಮೆ ಮೂರನೇ ಬಾರಿ ಮತ್ತೆ ಇದೇ ತಪ್ಪು ಮರುಕಳಿಸಿದರೆ ಆಗ ನಾಯಕ ಒಮದು ಪಂದ್ಯದ ನಿಷೇಧಕ್ಕೆ ಗುರಿಯಾಗಲಿದ್ದಾರೆ.

ಇದನ್ನೂ ಓದಿ IPL 2023 : ಎಸ್​ಆರ್​ಎಚ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಏಳು ರನ್​ ಜಯ

ಆರ್​​ಸಿಬಿ ಈಗಾಗಲೇ ಎರಡು ಬಾರಿ ತಪ್ಪು ಮಾಡಿದೆ. ಇದೀಗ ಮುಂದಿನ ಪಂದ್ಯದಲ್ಲಿಯೂ ಇದೇ ತಪ್ಪು ನಡೆದರೆ ಕಾಯಂ ನಾಯಕ ಫಾಫ್​ ಡು ಪ್ಲೆಸಿಸ್​ ಅಥವಾ ಹಂಗಾಮಿ ನಾಯಕ ವಿರಾಟ್​ ಕೊಹ್ಲಿಗೆ ಒಂದು ಪಂದ್ಯದ ನಿಷೇಧ ಶಿಕ್ಷೆ ಸಿಗಲಿದೆ. ಆದ್ದರಿಂದ ಆರ್​ಸಿಬಿ ಮುಂದಿನ ಪಂದ್ಯದಲ್ಲಿ ಎಚ್ಚರಿಕೆ ಆಟವಾಡುವುದು ಬಹುಮುಖ್ಯವಾಗಿದೆ.

Exit mobile version