ನವದೆಹಲಿ: ಬಿಸಿಸಿಐ ಮಾಜಿ ಅಧ್ಯಕ್ಷ, ಟಿಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡಿದ್ದಾರೆ. 16ನೇ ಆವೃತ್ತಿಯ ಐಪಿಎಲ್ನಲ್ಲಿ(IPL 2023) ಡೆಲ್ಲಿ ತಂಡದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಮೂಲಕ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಇದೇ ಮೊದಲ ಬಾರಿಗೆ ವೃತ್ತಿಪರವಾಗಿ ಕಾಣಿಸಿಕೊಳ್ಳಲಿದ್ದಾರೆ.
ಗಂಗೂಲಿ ಈ ಮೊದಲೂ ಡೆಲ್ಲಿ ತಂಡದ ಪರ ಕರ್ತವ್ಯ ನಿರ್ವಹಿಸಿದ್ದರು. 2019ರ ಋತುವಿನ ಐಪಿಎಲ್ನಲ್ಲಿ ಕೋಚ್ ರಿಕಿ ಪಾಂಟಿಂಗ್ ಜತೆ ತಂಡದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಆದರೆ ಅಕ್ಟೋಬರ್ 2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದರು. ಬಳಿಕ ಸ್ವಹಿತಾಸಕ್ತಿ ನಿಯಮದನ್ವಯ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜವಾಬ್ದಾರಿಯನ್ನು ತ್ಯಜಿಸಬೇಕಾಗಿತ್ತು. ಇದೀಗ ಮತ್ತೆ ನಿರ್ದೇಶಕರಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಳಯ ಸೇರಿದ್ದಾರೆ. ಈ ಮೂಲಕ ತಂಡಕ್ಕೆ ಮತ್ತು ಆಟಗಾರರಿಗೆ ನೆರವಾಗಲಿದ್ದಾರೆ.
“ಗಂಗೂಲಿ ಅವರು ತಂಡದ ನಿರ್ದೇಶಕರಾಗಿದ್ದು ಡೆಲ್ಲಿ ತಂಡಕ್ಕೆ ಮತ್ತಷ್ಟು ಬಲ ತಂದಿದೆ. ಅವರ ಅನುಭವದಲ್ಲಿ ಈ ಬಾರಿ ತಂಡ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ” ಎಂದು ಡೆಲ್ಲಿ ಫ್ರಾಂಚೈಸಿ ತಿಳಿಸಿದೆ.
ಇದನ್ನೂ ಓದಿ | IPL 2023 | ಮುಂಬೈ ಇಂಡಿಯನ್ಸ್ ತಂಡಕ್ಕೆ ಸಹಾಯಕ ಬ್ಯಾಟಿಂಗ್ ಕೋಚ್ ಆಗಿ ಕನ್ನಡಿಗ ಜಗದೀಶ್ ನೇಮಕ!