ಕೋಲ್ಕತ್ತಾ: 16ನೇ ಆವೃತ್ತಿಯ ಐಪಿಎಲ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲಡೆ ಸುದ್ದಿಯಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ರಿಂಕು ಸಿಂಗ್ ಅವರು ಶೀಘ್ರದಲ್ಲೇ ಟೀಮ್ ಇಂಡಿಯಾ ಪರ ಆಡಲಿದ್ದಾರೆ ಎಂದು ಈಗಾಗಲೇ ಹಲವರು ಭವಿಷ್ಯ ನುಡಿದಿದ್ದಾರೆ. ಆದರೆ ರಿಂಕು ಸಿಂಗ್ ಮಾತ್ರ ತಾನು ಭಾರತ ತಂಡದ ಪರ ಆಡುವ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಲಕ್ನೋ ವಿರುದ್ಧದ ಶನಿವಾರದ ಪಂದ್ಯದಲ್ಲಿ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ರಿಂಕು ಸಿಂಗ್ ಅವರು 67 ರನ್ ಬಾರಿಸಿ ಮಿಂಚಿದರು. ಆದರೆ ತಂಡ ಒಂದು ರನ್ ಅಂತರದಿಂದ ಸೋಲು ಕಂಡಿತು. ಪಂದ್ಯ ಸೋತರೂ ರಿಂಕು ಅವರು ಎಲ್ಲರ ಮನ ಗೆದ್ದರು. ಸ್ವತಃ ಎದುರಾಳಿ ತಂಡವೂ ರಿಂಕು ಅವರ ಈ ಸಾಹಸಕ್ಕೆ ತಂಡದ ಗೆಲುವನ್ನು ಸಂಭ್ರಮಿಸಿರಲಿಲ್ಲ.
ಇದನ್ನೂ ಓದಿ IPL 2023: ಭರ್ತಿ 200 ರನ್ ಪೇರಿಸಿದ ಹೈದರಾಬಾದ್
ಪಂದ್ಯದ ಬಳಿಕ ರಿಂಕು ಸಿಂಗ್ ಅವರಿಗೆ ಟೀಮ್ ಇಂಡಿಯಾ ಪರ ಆಡುವ ಯೋಚನೆ ಮಾಡಿದ್ದೀರಾ ಎಂಬ ಪ್ರಶ್ನೆಯೊಂದನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು ಸದ್ಯಕ್ಕೆ ನಾನು ಇನ್ನು ಹೆಚ್ಚಿನ ಕ್ರಿಕೆಟ್ ಅಭ್ಯಾಸ ನಡೆಸಬೇಕಿದೆ. ಆಯ್ಕೆಯ ಬಗ್ಗೆ ಈಗ ಯೋಚಿಸುತ್ತಿಲ್ಲ ಎಂದರು. ಗುಜರಾತ್ ವಿರುದ್ಧದ ಪಂದ್ಯದಲ್ಲಿ ನಾನು ಐದು ಸಿಕ್ಸರ್‌ಗಳನ್ನು ಹೊಡೆದಾಗಿನಿಂದ ನನ್ನ ಬಗ್ಗೆ ಎಲ್ಲರು ತಿಳಿದುಕೊಳ್ಳಲು ಆರಂಭಿಸಿದರು. ಸದ್ಯ ನನ್ನ ಕುಟುಂಬವು ತುಂಬಾ ಸಂತೋಷವಾಗಿದೆ. ಕೆಕೆಆರ್ ತಂಡ ನೀಡಿದ ಬೆಂಬಲದಿಂದ ನಾನು ನ್ನನ ಕ್ರಿಕೆಟ್ ಆಟವನ್ನು ಪ್ರದರ್ಶಿಸಲು ಕಾರಣವಾಯಿತು. ಮುಂದಿನ ಆವೃತ್ತಿಯಲ್ಲಿ ಮತ್ತಷ್ಟು ಬಲಿಷ್ಠವಾಗಿ ಹಿಂದಿರುಗುವ ವಿಶ್ವಾಸವಿದೆ ಎಂದು ರಿಂಕು ಕೇಳಿದರು.
ರಿಂಕು ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗಂಭೀರ್
ರಿಂಕು ಅವರ ಬ್ಯಾಟಿಂಗ್ಗೆ ಲಕ್ನೋ ತಂಡದ ಮೆಂಟರ್ ಆಗಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಿಂಕು ಅವರ ಈ ಸಾಹಸಕ್ಕೆ ಮೆಚ್ಚಲೇ ಬೇಕು ಅವರು ಭವಿಷ್ಯದಲ್ಲಿ ಉತ್ತಮ ಆಟಗಾರನಾಗಿ ಮೂಡಿಬರಲಿದ್ದಾರೆ ಎಂದು ಹೇಳಿದರು.