Site icon Vistara News

IPL 2023: ಚೆನ್ನೈ ತಂಡಕ್ಕೆ ಸ್ಟ್ರೋಕ್​ ಕೊಟ್ಟ ಸ್ಟೋಕ್ಸ್​

Ben Stokes csk

ಚೆನ್ನೈ: ಪ್ಲೇ ಆಫ್ ಹೊಸ್ತಿಲಲ್ಲಿ ಬಂದು ನಿಂತಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಆಘಾತವೊಂದು ಎದುರಾಗಿದೆ. ಫಿಟ್​ನೆಸ್​ ಸಮಸ್ಯೆಯಿಂದ ಬಳಲುತ್ತಿರುವ ಇಂಗ್ಲೆಂಡ್ ತಂಡದ ಸ್ಟಾರ್​ ಆಲ್​ರೌಂಡರ್​ ಬೆನ್ ಸ್ಟೋಕ್ಸ್(Ben Stokes) ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಬಳಿಕ ತವರಿಗೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ನಾಲ್ಕು ಬಾರಿಯ ಐಪಿಎಲ್(IPL 2023) ಚಾಂಪಿಯನ್ ಚೆನ್ನೈ ತಂಡವು ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಪ್ಲೇ ಆಫ್‌ ಆಡುವ ಸಾಧ್ಯತೆ ದಟ್ಟವಾಗಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಸ್ಟೋಕ್ಸ್​ಗೆ ಬಳಿಕದ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಪ್ಲೇ ಆಫ್​ ಸಂದರ್ಭದಲ್ಲಿ ಅವರನ್ನು ಆಡಿಸುವ ಯೋಜನೆ ಚೆನ್ನೈ ತಂಡದ್ದಾಗಿತ್ತು. ಆದರೆ ಇದೀಗ ಸ್ಟೋಕ್ಸ್​ ತಂಡಕ್ಕೆ ಮಹತ್ವದ ಘಟ್ಟದಲ್ಲೇ ಸ್ಟ್ರೋಕ್​ ನೀಡಿದ್ದಾರೆ.

ಇಂಗ್ಲೆಂಡ್​ ತಂಡ ಟಿ20 ವಿಶ್ವ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ​ ಬೆನ್ ಸ್ಟೋಕ್ಸ್‌ ಅವರನ್ನು ಚೆನ್ನೈ ತಂಡ ಕಳೆದ ಮಿನಿ ಹರಾಜಿನಲ್ಲಿ 16.25 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಸ್ಟೋಕ್ಸ್​ ಅವರು ಮೊಣಕಾಲಿನ ಗಾಯದಿಂದಾಗಿ ಸೀಮಿತ ಪಂದ್ಯಗಳಲ್ಲಿ ಆಡಿದ್ದರು. ಈ ಆವೃತ್ತಿಯಲ್ಲಿ ಒಂದು ಓವರ್ ಬೌಲಿಂಗ್ ಮಾಡಿದ್ದ ಅವರು 18 ರನ್ ನೀಡಿ ದುಬಾರಿಯಾಗಿದ್ದರು. ಸದ್ಯ ಅವರು ತವರಿಗೆ ಮರಳುವ ಸಿದ್ಧತೆಯಲ್ಲಿದ್ದಾರೆ.

ತವರಿಗೆ ಮರಳಲಿರುವ ಸ್ಟೋಕ್ಸ್​ ಅವರು ಜೂನ್ 16ರಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪ್ರತಿಷ್ಠಿತ ಆ್ಯಶಸ್​ ಟೆಸ್ಟ್​ ಸರಣಿಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎಂದು ಕ್ರಿಕ್​ಇನ್ಫೋ ವರದಿ ಮಾಡಿದೆ. ಆಷಸ್ ಸರಣಿಗೂ ಮುನ್ನ ಪೂರ್ವಭಾವಿ ಸಿದ್ದತೆಗಾಗಿ ಜೂನ್ ಒಂದರಿಂದ ಲಾರ್ಡ್ಸ್‌ ಮೈದಾನದಲ್ಲಿ ಇಂಗ್ಲೆಂಡ್​ ತಂಡ ಐರ್ಲೆಂಡ್ ವಿರುದ್ದ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ. ಈ ತಂಡವನ್ನು ಸ್ಟೋಕ್ಸ್​ ಮುನ್ನಡೆಸಲಿದ್ದಾರೆ.

ಇದನ್ನೂ ಓದಿ IPL 2023: ಲಕ್ನೋ ಪಂದ್ಯಕ್ಕೂ ಮುನ್ನ ಅರ್ಜುನ್​ ತೆಂಡೂಲ್ಕರ್​ಗೆ ನಾಯಿ ಕಡಿತ

ಇನ್ನೊಂದೆಡೆ ಧೋನಿ ಅವರು ಈ ಬಾರಿಯ ಐಪಿಎಲ್​ ಬಳಿಕ ವಿದಾಯ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದ್ದು. ಇದೇ ಕಾರಣಕ್ಕೆ ಕಳೆದ ಕೆಕೆಆರ್​ ವಿರುದ್ಧ ಚೆನ್ನೈಯಲ್ಲಿ ನಡೆದ ಪಂದ್ಯದ ಬಳಿಕ ಧೋನಿ ಅವರು ಅಭಿಮಾನಿಗಳಿಗೆ ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ್ದರು ಎಂದು ವರದಿಯಾಗಿದೆ. ಧೋನಿ ಬಳಿಕ ಚೆನ್ನೈ ತಂಡಕ್ಕೆ ಬೆನ್ ​ಸ್ಟೋಕ್ಸ್​ ಅವರು ಸಾರಥಿಯಾಗಲಿದ್ದಾರೆ ಎಂಬ ಮಾತುಗಳು ಕೂಡ ಈಗಾಗಲೇ ಕೇಳಿ ಬಂದಿವೆ. ಮುಂದಿನ ಆವೃತ್ತಿಯಲ್ಲಿ ಸ್ಟೋಕ್ಸ್​ ಅವರು ಗಾಯದಿಂದ ಸಂಪೂರ್ಣ ಗುಣಮುಖರಾಗಿ ಚೆನ್ನೈ ಪರ ಆಡುವ ವಿಶ್ವಾಸದಲ್ಲಿದ್ದಾರೆ.

Exit mobile version