ಅಹಮದಾಬಾದ್: ಮಾರ್ಚ್ 31 ರಂದು ಅಹಮದಾಬಾದ್ನಲ್ಲಿ ನಡೆದ ಐಪಿಎಲ್ 16ನೇ ಆವೃತ್ತಿಯ (IPL 2023) ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡತಿ ಹಾಗೂ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ(rashmika mandanna) ಪುಷ್ಪ ಸಿನಿಮಾದ ಹಾಡುಗಳಿಗೆ ಕುಣಿದು ಕ್ರಿಕೆಟ್ ಪ್ರೇಮಿಗಳ ಮನ ತಣಿಸಿದ್ದರು. ಈ ಚಿತ್ರದ ಅತ್ಯಂತ ಪ್ರಖ್ಯಾತಿ ಪಡೆದ ಸಾಮಿ ಸಾಮಿ ಹಾಡಿಗೆ ಅವರು ಕುಣಿಯುತ್ತಿದ್ದಂತೆ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳು ಹರ್ಷದಿಂದ ಕುಣಿದು ಕುಪ್ಪಳಿಸಿದ್ದರು. ಈ ಮೂಲಕ ಕ್ರಿಕೆಟ್ನ ಸವಿ ಉಣಲು ಕಾಯುತ್ತಿದ್ದ ಅಭಿಮಾನಿಗಳು ಮೋಹಕ ತಾರೆಯ ನೃತ್ಯ ವೈಭವವನ್ನು ಕಣ್ತುಂಬಿಕೊಂಡಿದ್ದರು.
ರಶ್ಮಿಕಾ ಮಂದಣ್ಣ ಅವರ ಸಾಮಿ ಸಾಮಿ ಹಾಡಿನ ನೃತ್ಯಕ್ಕೆ ಕೇವಲ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೆ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಆಟಗಾರ ಸುನೀಲ್ ಗವಾಸ್ಕರ್(sunil gavaskar) ಕೂಡ ಮನಸೋತ್ತಿದ್ದರೆ. ರಶ್ಮಿಕಾ ಮಂದಣ್ಣ ಅವರ ನೃತ್ಯವನ್ನು ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತು ನೋಡುತ್ತಿದ್ದ ಸುನೀಲ್ ಗವಾಸ್ಕರ್ ತಾವು ಕೂಡ ರಶ್ಮಿಕಾ ಅವರಂತೆಯೇ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುನೀಲ್ ಗವಾಸ್ಕರ್ ಅವರು ‘ಸಾಮಿ ಸಾಮಿ’ ಹಾಡಿಗೆ ನೃತ್ಯ ಮಾಡುವ ವಿಡಿಯೋವನ್ನು ಆಸ್ಟ್ರೇಲಿಯಾದ ಕ್ರೀಡಾ ನಿರೂಪಕಿಯಾದ ನೆರೋಲಿ ಮೆಡೋಸ್ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಶ್ವದ ಅತಿದೊಡ್ಡ ಟಿ20 ಕ್ರಿಕೆಟ್ ಲೀಗ್ ಐಪಿಎಲ್ನ 16ನೇ ಆವೃತ್ತಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಉದ್ಘಾಟನಾ ಸಮಾರಂಭದಲ್ಲಿ ಪ್ರಸಿದ್ಧ ಗಾಯಕ ಅರ್ಜಿತ್ ಸಿಂಗ್, ಬಹುಭಾಷಾ ನಟಿ ತಮನ್ನಾ ಭಾಟಿಯಾ ಮತ್ತು ರಶ್ಮಿಕಾ ಮಂದಣ್ಣ ನೃತ್ಯ ಪ್ರದರ್ಶನ ನೀಡಿದ್ದರು.
ಗುಜರಾತ್ ಮತ್ತು ಚೆನ್ನೈ ನಡುವೆ ನಡೆದಿದ್ದ ಈ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ 19.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿ ಜಯ ಸಾಧಿಸಿತ್ತು.
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಗುಜರಾತ್ ಟೈಟನ್ಸ್ ತಂಡ 37 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ವೃದ್ಧಿಮಾನ್ ಸಾಹ 25 ರನ್ ಬಾರಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಸಾಯಿ ಸುದರ್ಶನ್ 22 ರನ್ ಬಾರಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 8 ರನ್ಗೆ ಔಟಾಗುವ ಮೂಲಕ ತಂಡಕ್ಕೆ ಹಿನ್ನಡೆ ಉಂಟಾಯಿತು. ಆದರೆ, ಕೊನೇ ಹಂತದಲ್ಲಿ ವಿಜಯ್ ಶಂಕರ್ (27), ರಾಹುಲ್ ತೆವತಿಯಾ (15) ಹಾಗೂ ರಶೀದ್ ಖಾನ್ (10) ತಂಡವನ್ನು ಗೆಲ್ಲಿಸಿದ್ದರು.