Site icon Vistara News

IPL 2023: ಮುಂಬೈಗೆ ಗೆಲುವಿನ ‘ಸೂರ್ಯೋದಯ’

IPL 2023: 'Sunrise' of victory for Mumbai

IPL 2023: 'Sunrise' of victory for Mumbai

ಮುಂಬಯಿ: ಬ್ಯಾಟರ್​ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ತವರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ಭರ್ಜರಿ 5 ವಿಕೆಟ್​ಗಳ ಗೆಲುವು ಕಂಡಿದೆ. ಈ ಮೂಲಕ ತಾನಾಡಿದ ನಾಲ್ಕು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದೆ. ಆದರೆ ಗಾಯದ ಮಧ್ಯೆಯೂ ಶತಕ ಸಿಡಿಸಿದ ಕೆಕೆಆರ್​ ತಂಡದ ವೆಂಕಟೇಶ್​ ಅಯ್ಯರ್(104)​ ಅವರ ಹೋರಾಟ ವ್ಯರ್ಥವಾಯಿತು.

ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಭಾನುವಾರದ ಡಬಲ್​ ಹೆಡರ್​ನ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಕೋಲ್ಕತ್ತಾ ನೈಟ್​ ರೈಡರ್ಸ್​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 185 ರನ್​ ಗಳಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್​ 17.4 ಓವರ್​​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 186 ರನ್​ ಬಾರಿಸಿ ಗೆಲುವು ದಾಖಲಿಸಿತು.

ಟಾಸ್​ ವೇಳೆ ಹೊರಗುಳಿದಿದ್ದ ರೋಹಿತ್​ ಶರ್ಮ ಚೇಸಿಂಗ್ ವೇಳೆ ಇಂಪ್ಯಾಕ್ಟ್​ ಪ್ಲೇಯರ್​ ರೂಪದಲ್ಲಿ ಬ್ಯಾಟಿಂಗ್​ ನಡೆಸಲು ಕಣಕ್ಕಿಳಿದರು. ಆದರೆ ಅವರ ಆಗಮನ ತಂಡಕ್ಕೆ ಯಾವುದೇ ಇಂಪ್ಯಾಕ್ಟ್​ ಆಗಲಿಲ್ಲ. ಕೇವಲ 20 ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ಆದರೆ ಮತ್ತೊಂದು ಬದಿಯಲ್ಲಿ ಸಿಡಿದು ನಿಂತ ಇಶಾನ್​ ಕಿಶನ್​ ಸತತ ಬೌಂಡರಿ, ಸಿಕ್ಸರ್​ ಬಾರಿಸುತ್ತ ರನ್​ ಕಲೆಹಾಕಿದರು.

25 ಎಸೆತ ಎದುರಿಸಿದ ಇಶಾನ್​ ಕಿಶನ್​ ಬರೋಬ್ಬರಿ 5 ಸಿಕ್ಸರ್​ ಮತ್ತು ಬೌಂಡರಿ ಸಿಡಿಸಿ 58 ರನ್​ ಗಳಿಸಿ ಅರ್ಧಶತಕ ಬಾರಿಸಿದರು. ಈ ವಿಕೆಟ್​ ಪತನದ ಬಳಿಕ ಕ್ರೀಸ್​ಗೆ ಬಂದ ತಿಲಕ್​ ವರ್ಮ ಕೂಡ ಬಿರುಸಿನ ಬ್ಯಾಟಿಂಗ್​ ನಡೆಸಿ 30 ರನ್​ ಕೊಡುಗೆ ನೀಡಿದರು. ಆಡಿದ ಮೂರು ಪಂದ್ಯಗಳಲ್ಲಿಯೂ ಸಿಂಗಲ್​ ಡಿಜಿಟ್​ಗೆ ಸೀಮಿತವಾಗಿದ್ದ ಸ್ಫೋಟಕ ಬ್ಯಾಟಿಂಗ್​ ಖ್ಯಾತಿಯ ಸೂರ್ಯಕುಮಾರ್​ ಯಾದವ್​, ಈ ಪಂದ್ಯದಲ್ಲಿ ಸಿಡಿದು ನಿಂತು ತಮ್ಮ ಕಳಪೆ ಬ್ಯಾಟಿಂಗ್​ ಫಾರ್ಮ್​ನಿಂದ ಹೊರಬಂದರು.

ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಸೂರ್ಯಕುಮಾರ್​ 25 ಎಸೆತಗಳ ಮುಂದೆ ಮೂರು ಸಿಕ್ಸರ್​ ಮತ್ತು ನಾಲ್ಕು ಬೌಂಡರಿ ನೆರವಿನಿಂದ 43 ರನ್​ ಬಾರಿಸಿದರು. ಇಷ್ಟು ದಿನ ಕಳಪೆ ಬ್ಯಾಟಿಂಗ್​ ಮೂಲಕ ಟೀಕೆಗೆ ಗುರಿಯಾಗಿದ್ದ ಅವರಿಗೆ ಈ ಪಂದ್ಯದ ಮೂಲಕ ಸೂರ್ಯೋದಯವಾದಂತೆ ಕಾಣುತ್ತಿದೆ. ಅಂತಿಮವಾಗಿ ಟಿಮ್​ ಡೇವಿಡ್​ ಅಜೇಯ 24 ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೆಕೆಆರ್​ ಪರ ಸುಯೇಶ್​ ಶರ್ಮ 2 ವಿಕೆಟ್​ ಕಿತ್ತರು.

ಗಾಯದ ಮಧ್ಯೆಯೂ ಶತಕ ಸಿಡಿಸಿದ ವೆಂಕಿ

ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಕೆಕೆಆರ್​ ಆರಂಭಿಕ ಆಟಗಾರರಾದ ರಹಮಾನುಲ್ಲಾ ಗುರ್ಬಾಜ್(8) ಮತ್ತು ಎನ್​. ಜಗದೀಶನ್​(0) ವಿಕೆಟ್ ಕಳೆದು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಕ್ರೀಸ್​ಗೆ ಬಂದ ವೆಂಕಟೇಶ್​ ಅಯ್ಯರ್​ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್​ ನಡೆಸಿ ಮುಂಬೈ ಬೌಲರ್​ಗಳ ಮೇಲೆ ಸವಾರಿ ನಡೆಸಿದರು. ಇದರ ಮಧ್ಯೆ 13 ರನ್​ ಗಳಿಸಿದ್ದ ವೇಳೆ ಅವರ ಮಂಡಿಗೆ ಚೆಂಡು ಬಡಿದು ಗಾಯಗೊಂಡರು. ಈ ಗಾಯದ ಮಧ್ಯೆಯೂ ಛಲ ಬಿಡದೆ ಆಟ ಮುಂದುವರಿಸಿದ ಅವರು ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಇದು ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ದಾಖಲಾದ ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ಸನ್​ರೈಸರ್ಸ್​ ತಂಡದ ಹ್ಯಾರಿ ಬ್ರೂಕ್​ ಶತಕ ಬಾರಿಸಿದ್ದರು. ಒಟ್ಟು 51 ಎಸೆತ ಎದುರಿಸಿದ ಅವರು ಬರೋಬ್ಬರಿ 9 ಸಿಕ್ಸರ್​ ಮತ್ತು 6 ಬೌಂಡರಿ ನೆರವಿನಿಂದ 104 ರನ್​ ಗಳಿಸಿದರು. ಇವರ ವಿಕೆಟ್​ ರಿಲೆ ಮೆರೆಡಿತ್​ ಪಾಲಾಯಿತು.

ಇದನ್ನೂ ಓದಿ IPL 2023: ಕಳೆದ ಬಾರಿಯ ಫೈನಲಿಸ್ಟ್​ಗಳ ಮಧ್ಯೆ ಹೈ ವೋಲ್ಟೇಜ್ ಪಂದ್ಯ

ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಯಾರು ಊಹಿಸದ ರೀತಿಯಲ್ಲಿ ಬ್ಯಾಟಿಂಗ್​ ನಡೆಸಿ ಸುದ್ದಿಯಾಗಿದ್ದ ಶಾರ್ದೂಲ್​ ಠಾಕೂರ್​ ಅವರು ಈ ಪಂದ್ಯದಲ್ಲಿ ಬ್ಯಾಟಿಂಗ್​ ಭಡ್ತಿ ಪಡೆದು ಬಂದರೂ ತಂಡಕ್ಕೆ ಯಾವುದೇ ದೊಡ್ಡ ಲಾಭವಾಗಲಿಲ್ಲ. 13 ಎಸೆತಗಳಿಂದ 11 ರನ್​ ಗಳಿಸಿದರು. ಬಾರಿಸಿದ್ದು ಒಂದೇ ಬೌಂಡರಿ. ನಾಯಕ ನಿತೀಶ್​ ರಾಣ ಕೂಡ 5 ರನ್​ ಗಳಿಸಿ ಆಟ ಮುಗಿಸಿದರು. ಈ ವಿಕೆಟ್​ ಪಡೆದ ಸಂಭ್ರಮದಲ್ಲಿ ಹೃತಿಕ್ ಶೋಕೀನ್ ಅವರು ರಾಣಾಗೆ ಏನೋ ಹೇಳಿದರು. ಈ ವೇಳೆ ರಾಣ ಆಕ್ರೋಶಗೊಂಡು ಮೈದಾನದಲ್ಲೇ ಮಾತಿನ ಚಕಮಕಿ ನಡೆಯಿತು. ಬಳಿಕ ಮುಂಬೈ ಆಟಗಾರರು ಮಧ್ಯೆ ಪ್ರವೇಶಿಸಿ ಈ ಪರಿಸ್ಥಿತಿಯನ್ನು ತಣ್ಣಗಾಗಿಸಿದರು.

ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿನ ಬ್ಯಾಟಿಂಗ್​ ನಡೆಸಿದ್ದ ರಿಂಕು ಸಿಂಗ್ ಅವರು ಈ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ವೈಭವವನ್ನು ತೋರಿಸುವಲ್ಲಿ ವಿಫಲರಾದರು. ಎಸೆತವೊಂದಕ್ಕೆ ರನ್​ ಗಳಿಸಿದ ಅವರು 18 ರನ್​ ಬಾರಿಸಿದರು. ಅಂತಿಮ ಹಂತದಲ್ಲಿ ಸಿಡಿದು ನಿಂತ ಆ್ಯಂಡ್ರೆ ರಸೆಲ್​ 11 ಎಸೆತಗಳ ಮುಂದೆ 21 ರನ್​ ಬಾರಿಸಿ ಅಜೇಯರಾಗಿ ಉಳಿದರು. ಅವರ ಈ ಬ್ಯಾಟಿಂಗ್​ ನೆರವಿನಿಂದ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಮುಂಬೈ ಪರ ಹೃತಿಕ್ ಶೋಕೀನ್ 2 ವಿಕೆಟ್​ ಕಿತ್ತು ಮಿಂಚಿದರು.

ಅರ್ಜುನ್​ ತೆಂಡೂಲ್ಕರ್​ ಪದಾರ್ಪಣೆ

ಕಳೆದ ಎರಡು ಆವೃತ್ತಿಗಳಲ್ಲಿಯೂ ಮುಂಬೈ ಇಂಡಿಯನ್ಸ್​ ತಂಡದ ಭಾಗವಾಗಿದ್ದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ಪುತ್ರ ಅರ್ಜುನ್​ ತೆಂಡೂಲ್ಕರ್​(Arjun Tendulkar) ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್​ಗೆ ಪದಾರ್ಪಣೆ ಮಾಡಿದರು. ರೋಹಿತ್​ ಶರ್ಮ ಅವರು ಕ್ಯಾಪ್​ ನೀಡಿ ತಂಡಕ್ಕೆ ಬರಮಾಡಿಕೊಂಡರು. ಇದೇ ವೇಳೆ ತಮ್ಮನ ಚೊಚ್ಚಲ ಪಂದ್ಯವನ್ನು ವೀಕ್ಷಿಸಲು ಅಕ್ಕ ಸಾರಾ ತೆಂಡೂಲ್ಕರ್​ ಕೂಡ ಉಪಸ್ಥಿತರಿದ್ದರು.​ ಆದರೆ ಅವರು ಈ ಪಂದ್ಯದಲ್ಲಿ ವಿಕೆಟ್​ ಪಡೆಯುವಲ್ಲಿ ವಿಫಲರಾದರು. 2 ಓವರ್​ ಎಸೆದ ಅವರು 17 ರನ್​ ಬಿಟ್ಟುಕೊಟ್ಟರು.

Exit mobile version