ಕೋಲ್ಕೊತಾ: ಭಾನುವಾರ ರಾತ್ರಿ ಕೋಲ್ಕೊತಾದಲ್ಲಿ ನಡೆದ ಐಪಿಎಲ್9IPL 2023) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 49 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಆದರೆ ಈ ಪಂದ್ಯದಲ್ಲಿ ಕೆಕೆಆರ್ ಬೌಲರ್ ಸುಯೇಶ್ ಶರ್ಮಾ ಅವರು ವಿಕೆಟ್ ಪಡೆದ ಬಳಿಕ ತೋರಿದ ವಿಚಿತ್ರ ವರ್ತನೆಯ ವಿಡಿಯೊ ಇದೀಗ ವೈರಲ್ ಆಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈಗೆ ಆರಂಭಿಕಾರಾದ ಋತುರಾಜ್ ಗಾಯಕ್ವಾಡ್ ಮತ್ತು ಡೆವೋನ್ ಕಾನ್ವೆ ಉತ್ತಮ ಅಡಿಪಾಯ ನಿರ್ಮಿಸಿದರು. ಈ ಜೋಡಿ 10 ಸರಾಸರಿಯಲ್ಲಿ ಬ್ಯಾಟ್ ಬೀಸಿ ಪವರ್ ಪ್ಲೇಯಲ್ಲಿ 59 ರನ್ ಒಟ್ಟುಗೂಡಿಸಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸುತ್ತಿದ್ದ ಈ ಜೋಡಿಯನ್ನು 19 ವರ್ಷದ ನೀಳ ಕೇಶದ ಮಿಸ್ಟ್ರಿ ಸ್ಪಿನ್ನರ್ ಸುಯೇಶ್ ಶರ್ಮಾ ಬೇರ್ಪಡಿಸುವಲ್ಲಿ ಯಶಸ್ವಿಯಾದರು.
ಗಾಯಕ್ವಾಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಸುಯೇಶ್ ಶರ್ಮಾ ವಿಚಿತ್ರ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಕೈಯಲ್ಲಿ ಗನ್ ಹಿಡಿದು ಶೂಟ್ ಮಾಡಿದಂತೆ ಸಂಭ್ರಮಿಸಿದರು. ಜತೆಗೆ ಅವಾಚ್ಯವಾಗಿ ಏನೋ ಬೈದಿದ್ದಾರೆ. ಅವರ ಈ ರೋಷಾವೇಶದ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಲೋಕಕ್ಕೆ ಅಂಬೆಗಾಲಿಡುತ್ತಿರುವ ನೀವು ಈ ರೀತಿ ವರ್ತಿಸಿದರೆ ಅದು ನಿಮಗೆ ಶೋಭೆ ತರುವುದಿಲ್ಲ. ವಿಕೆಟ್ ಪಡೆದರೆ ಸಂಭ್ರಮಿಸುವುದರಲ್ಲಿ ತಪ್ಪಿಲ್ಲ ಆದರೆ ಈ ರೀತಿಯ ವರ್ತನೆ ಸಲ್ಲ ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ನಾಲ್ಕು ಓವರ್ ಎಸೆದ ಅವರು 29 ರನ್ ನೀಡಿ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ IPL 2023: ಪುಷ್ಪ-2 ಅವತಾರದಲ್ಲಿ ಕಾಣಿಸಿಕೊಂಡ ಡೇವಿಡ್ ವಾರ್ನರ್
ಸೋಲು ಕಂಡ ಕೆಕೆಆರ್
ಕೋಲ್ಕೊತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ದೊಡ್ಡ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿ ಹೋದ ಕೆಕೆಆರ್ ತನ್ನ ಪಾಲಿನ ಆಟದಲ್ಲಿ 8 ವಿಕೆಟ್ ಕಳೆದುಕೊಂಡು 186 ರನ್ ಗಳಿಸಲಷ್ಟೇ ಶಕ್ತವಾಯಿತು.