ಅಹಮದಾಬಾದ್: ಗುಜರಾತ್ ವಿರುದ್ಧ ನಡೆದ 16ನೇ ಆವೃತ್ತಿಯ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ(Dhoni) ಅವರು ಗಾಯಕ್ಕೆ ತುತ್ತಾಗಿದ್ದರು. ಇದೀಗ ಅವರ ಗಾಯದ ಬಗ್ಗೆ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್(Stephen Fleming) ಅವರು ಮಾಹಿತಿ ನೀಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಟೀಫನ್ ಫ್ಲೆಮಿಂಗ್ ಅವರು ಧೋನಿ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಧೋನಿಗೆ ಯಾವುದೇ ರೀತಿಯ ಗಂಭೀರ ಗಾಯವಾಗಿಲ್ಲ. ಅವರು ಮೊಣಕಾಲಿನ ಗಾಯದಿಂದ ಬಳಲುತ್ತಿಲ್ಲ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಅವರಿಗೆ ಸಣ್ಣ ಪ್ರಮಾಣದ ಕಾಲು ನೋವು ಕಾಣಿಸಿದ್ದು ನಿಜ. ಆದರೆ ಅವರು ಮುಂದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂಬುದು ಸುದ್ದಿ ಸುಳ್ಳು ಎಂದು ಫ್ಲೆಮಿಂಗ್ ಖಚಿತಪಡಿಸಿದ್ದಾರೆ.
ಒಂದು ವರ್ಷಗಳ ಬಳಿಕ ಕ್ರಿಕೆಟ್ ಆಡುತ್ತಿರುವ ಕಾರಣ ಧೋನಿಗೆ ಈ ಸ್ನಾಯು ಸೆಳೆತವಾಗಿದೆ. ಅವರು ಓರ್ವ ಲೆಜೆಂಡ್ ಆಟಗಾರ. ಮುಂದಿನ ಪಂದ್ಯದದಲ್ಲಿ ಅವರು ಕಣಕ್ಕಿಳಿಯುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಫ್ಲೆಮಿಂಗ್ ಹೇಳಿದರು. ಫ್ಲೆಮಿಂಗ್ ಅವರ ಈ ಹೇಳಿಕೆಯಿಂದ ಧೋನಿ ಅಭಿಮಾನಿಗಳು ನಿರಾಳರಾಗಿದ್ದಾರೆ. ದೀಪಕ್ ಚಹರ್ ಅವರ ಎಸೆತಕ್ಕೆ ಲೆಗ್ ಸೇಡ್ನತ್ತ ಬ್ಯಾಟ್ ಬಿಸಿದ ವೇಳೆ ಧೋನಿ ಚೆಂಡನ್ನು ತಡೆಯಲು ಜಿಗಿದರು. ಈ ವೇಳೆ ಧೋನಿ ಕಾಲಿನ ನೋವಿಗೆ ತುತ್ತಾಗಿ ಕೆಲ ಕಾಲ ನೋವಿನಿಂದ ಬಳಲಿದ್ದರು.
ಈ ಪಂದ್ಯದಲ್ಲಿ ಧೋನಿ ಅವರು 7 ಎಸೆತ ಎದುರಿಸಿ ಅಜೇಯ 14 ರನ್ ಬಾರಿಸಿದರು. ಈ ಇನಿಂಗ್ಸ್ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ದಾಖಲಾಯಿತು. ಧೋನಿ ಅವರು ಬಾರಿಸಿದ ಈ ಒಂದು ಸಿಕ್ಸರ್ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
5 ವಿಕೆಟ್ ಸೋಲು ಕಂಡ ಚೆನ್ನೈ
ಶುಕ್ರವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಈ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ 19.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿ ಜಯ ಸಾಧಿಸಿತು.
ಇದನ್ನೂ ಓದಿ IPL 2023 : ಆರ್ಸಿಬಿ ಕ್ಯಾಂಪ್ನಲ್ಲಿ ಸುನೀಲ್ ಚೆಟ್ರಿ, ಡೈವ್ ಹೊಡೆದು ಕ್ಯಾಚ್ ಹಿಡಿದ ಫುಟ್ಬಾಲ್ ದಿಗ್ಗಜ
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಗುಜರಾತ್ ಟೈಟಾನ್ಸ್ ತಂಡ 37 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ವೃದ್ಧಿಮಾನ್ ಸಾಹ 25 ರನ್ ಬಾರಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಸಾಯಿ ಸುದರ್ಶನ್ 22 ರನ್ ಬಾರಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 8 ರನ್ಗೆ ಔಟಾಗುವ ಮೂಲಕ ತಂಡಕ್ಕೆ ಹಿನ್ನಡೆ ಉಂಟಾಯಿತು. ಆದರೆ, ಕೊನೇ ಹಂತದಲ್ಲಿ ವಿಜಯ್ ಶಂಕರ್ (27), ರಾಹುಲ್ ತೆವತಿಯಾ (15) ಹಾಗೂ ರಶೀದ್ ಖಾನ್ (10) ತಂಡವನ್ನು ಗೆಲ್ಲಿಸಿದರು.
ಅದಕ್ಕಿಂತ ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಬ್ಯಾಟರ್ ಡೆವೋನ್ ಕಾನ್ವೆ 1 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ಹಿನ್ನಡೆ ಉಂಟು ಮಾಡಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಮೊಯೀನ್ ಅಲಿ ಸ್ಫೋಟಕ ಬ್ಯಾಟಿಂಗ್ ಮಾಡಿದರೂ 23 ರನ್ಗಳಿಗೆ ಔಟಾದರು. ಸಿಎಸ್ಕೆ ಪರ ಸ್ಫೋಟಕ ಅರ್ಧ ಶತಕ ಬಾರಿಸಿದ ಋತುರಾಜ್ ಗಾಯಕ್ವಾಡ್ 92 ರನ್ ಬಾರಿಸಿ ಮಿಂಚಿದರು.