ಬೆಂಗಳೂರು: ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಒಂದು ವಿಕೆಟ್ ಅಂತರದಿಂದ ಸೋಲು ಕಂಡಿದೆ. ಆರ್‌ಸಿಬಿ ಸೋಲು ಕಾಣುತ್ತಿದಂತೆಯೇ ಅನುಷ್ಕಾ ಶರ್ಮಾ ಅವರ ಮುಖದ ರಿಯಾಕ್ಷನ್ನ ವಿಡಿಯೊ ಮತ್ತು ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಅತ್ಯಂತ ರೋಚಕವಾಗಿ ನಡೆದ ಐಪಿಎಲ್ನ 15ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಎರಡೇ ವಿಕೆಟಿಗೆ 212 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 9 ವಿಕೆಟ್ಗೆ 213 ರನ್ ಬಾರಿಸಿ ಗೆಲುವು ದಾಖಲಿಸಿತು. ಈ ಪಂದ್ಯ ನೋಡಲು ಬಂದ ಅನುಷ್ಕಾ ಶರ್ಮಾ ಆರ್‌ಸಿಬಿ ಮತ್ತು ತಮ್ಮ ಪತ್ನಿ ವಿರಾಟ್ ಕೊಹ್ಲೆಗೆ ಬೆಂಬಲಿಸುತ್ತಿದ್ದರು. ಕೊಹ್ಲಿ, ಮ್ಯಾಕ್ಸ್ವೆಲ್, ಫಾಫ್ ಡು ಪ್ಲೆಸಿಸ್ ಬ್ಯಾಟಿಂಗ್ ಕಂಡು ಸಂಭ್ರಮಿಸಿದ ಅವರು ಆ ಬಳಿಕ ಲಕ್ನೋ ತಂಡದ ನಾಯಕ, ಕನ್ನಡಿಗ ಕೆ.ಎಲ್ ರಾಹುಲ್ ವಿಕೆಟ್ ಪತನದ ವೇಳೆ ಕುಣಿದು ಕುಪ್ಪಳಿಸಿದರು.
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಮುಂದಾದ ರಾಹುಲ್ ಅವರು ಬೌಂಡರಿ ಲೈನ್ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು. ಕ್ಯಾಚ್ ಪಡೆದ ವಿರಾಟ್ ಕೊಹ್ಲಿ ಏನೋ ದೊಡ್ಡ ಮಟ್ಟದ ಸಾಧನೆ ಮಾಡಿದವರಂತೆ ಸಂಭ್ರಮಿಸಿದರು. ಇದೇ ವೇಳೆ ಅನುಷ್ಕಾ ಕೂಡ ಗ್ಯಾಲರಿಯಲ್ಲಿ ಕುಣಿದು ಸಂಭ್ರಮಿಸಿದರು. ಆದರೆ ಅಂತಿಮವಾಗಿ ಪಂದ್ಯ ಸೋತಾಗ ಹುಲಿಯಂತಿದ್ದ ಕೊಹ್ಲಿ ಮತ್ತು ಅನುಷ್ಕಾ ಇಲಿಯಂತೆ ಸಪ್ಪೆ ಮೋರೆ ಹಾಕಿ ಕುಳಿತ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನೊಂದೆಡೆ ಆರ್‌ಸಿಬಿ ಅಭಿಮಾನಿಗಳು ಕೂಡ ಆರಂಭದಲ್ಲಿ ಲಕ್ನೋದ ಮೂರು ವಿಕೆಟ್ ಹೋದಾಗ ಇನ್ನೇನು ಪಂದ್ಯವನ್ನು ಗೆದ್ದೇ ಬಿಟ್ಟಂತೆ ಸಂಭ್ರಮಿಸಲಾರಂಭಿಸಿದ್ದರು. ಆದರೆ ಅಂತಿಮ ಹಂತದಲ್ಲಿ ಸಿಡಿದು ನಿಂತ ಮಾರ್ಕಸ್ ಸ್ಟೋಯಿನಿಸ್ ಮತ್ತು ನಿಕೋಲಸ್ ಪೂರಣ್ ಲಕ್ನೋಗೆ ರೋಚಕ ಜಯ ತಂದುಕೊಟ್ಟರು. ಅಷ್ಟರ ವರೆಗೆ ಆರ್‌ಸಿಬಿ…ಆರ್‌ಸಿಬಿ ಎಂದು ಕೂಗುತ್ತಿದ್ದ ಅಭಿಮಾನಿಗಳು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಸ್ಟೇಡಿಯಂನಿಂದ ಹೊರನಡೆದರು.
ರೋಚಕ ಗೆಲುವು ಸಾಧಿಸಿದ ಲಕ್ನೋ
ಕೊನೆಯ 6 ಎಸೆತದಲ್ಲಿ ಲಕ್ನೋಗೆ ಗೆಲ್ಲಲು 5 ರನ್ ತೆಗೆಯುವ ಸವಾಲು ಎದುರಾಯಿತು. ಮೊದಲ ಎಸೆತದಲ್ಲಿ ಉನಾದ್ಕತ್ 1 ರನ್ ಗಳಿಸಿದರು. 2ನೇ ಎಸೆತದಲ್ಲಿ ವುಡ್ ಬೌಲ್ಡ್ ಆದರು. 3ನೇ ಎಸೆತದಲ್ಲಿ ರವಿ ಬಿಷ್ಣೋಯಿ 2 ರನ್ ಕದ್ದರು. 4ನೇ ಎಸೆತದಲ್ಲಿ 1 ರನ್ ಪಡೆದ ಬಿಷ್ಣೋಯಿ ಸ್ಕೋರ್ ಸಮಗೊಳ್ಳುವಂತೆ ಮಾಡಿದರು. 5ನೇ ಎಸೆತದಲ್ಲಿ ಉನಾದ್ಕತ್ ಅವರು ಡು ಪ್ಲೆಸಿಸ್ಗೆ ಕ್ಯಾಚ್ ನೀಡಿ ಔಟಾದರು. ಅಂತಿಮ ಎಸೆತವನ್ನು ಬೌಲ್ ಮಾಡುವಾಗ ಹರ್ಷಲ್ ಮೊದಲು ಮಂಕಡಿಂಗ್ ಯತ್ನದಲ್ಲಿ ಎಡವಿದರು. ಆದರೆ ಮುಂದಿನ ಎಸೆತವನ್ನು ಡಾಟ್ ಮಾಡಿದರು ಬೈಸ್ ಮೂಲಕ ಒಂದು ರನ್ ಕದ್ದ ಲಕ್ನೋ ಒಂದು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿತು.