ಬೆಂಗಳೂರು: ಭಾನುವಾರ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ವಿರುದ್ಧ ಸೋಲುವ ಮೂಲಕ ಆರ್ಸಿಬಿ ತನ್ನ ಅಭಿಯಾನ ಮುಗಿಸಿತು. ಈ ಮೂಲಕ ಮತ್ತೊಮ್ಮೆ ಆರ್ಸಿಬಿಯ ಕಪ್ ಕನಸಾಗಿಯೇ ಉಳಿಯಿತು. ವಿರಾಟ್ ಕೊಹ್ಲಿ ಅವರು ಬಾರಿಸಿದ ಶತಕವೂ ವ್ಯರ್ಥವಾಯಿತು. ತಂಡ ಸೋಲು ಕಂಡ ಕ್ಷಣ ವಿರಾಟ್ ಕೊಹ್ಲಿ ಡಗೌಟ್ನಲ್ಲಿ ತುಂಬಾ ಹತಾಶರಾಗಿದ್ದು ಕಂಡು ಬಂತು.
ಆರ್ಸಿಬಿ ಸೋಲು ಕಂಡ ಕಾರಣ ಇದೀಗ ತಂಡದ ಮಾಜಿ ಆಟಗಾರ ಇಂಗ್ಲೆಂಡ್ನ ಕೆವೀನ್ ಪೀಟರ್ಸನ್ ಅವರು ಕೊಹ್ಲಿಗೆ ಮತ್ವದ ಸಲಹೆಯೊಂದನ್ನು ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು,”ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಲು ಇದು ಸೂಕ್ತ ಸಮಯ” ಎಂದು ತಿಳಿಸಿದ್ದಾರೆ. ಪೀಟರ್ಸನ್ ಅವರು ಹೀಗೆ ಹೇಳಲು ಒಂದು ಕಾರಣವಿದೆ. ಕೊಹ್ಲಿಯ ತವರು ಡೆಲ್ಲಿ ಆದ ಕಾರಣ ಇನ್ನುಳಿದ ಆವೃತ್ತಿಯ ಐಪಿಎಲ್ನಲ್ಲಾದರು ಅವರ ತವರು ತಂಡವನ್ನು ಪ್ರತಿನಿಧಿಸಲಿ ಎನ್ನುವ ಅರ್ಥದಲ್ಲಿ ಈ ಟ್ವೀಟ್ ಮಾಡಿದ್ದಾರೆ. ಆದರೆ ಪೀಟರ್ಸನ್ ಅವರ ಈ ಟ್ವೀಟ್ಗೆ ಆರ್ಸಿಬಿ ಅಭಿಮಾನಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕಪ್ ಗೆಲ್ಲದಿದ್ದರೂ ಕೊಹ್ಲಿ ಕ್ರಿಕೆಟ್ ಆಡುವವರೆಗೂ ಬಿಟ್ಟುಕೊಡುವುದಿಲ್ಲ ಎಂದು ಹಲವು ಟ್ವೀಟ್ಗಳ ಮೂಲಕ ಪೀಟರ್ಸನ್ಗೆ ತಿರುಗೇಟು ನೀಡಿದ್ದಾರೆ.
ಟೀಕೆಗೆ ಖಡಕ್ ವಾರ್ನಿಂಗ್ ನೀಡಿದ ಕೊಹ್ಲಿ
ಗುಜರಾತ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ದಾಖಲೆ ಬರೆದ ವಿರಾಟ್ ಕೊಹ್ಲಿ ಪಂದ್ಯದ ಬಳಿಕ ಮಾತನಾಡುವ ವೇಳೆ ತಮ್ಮ ವಿರುದ್ಧ ಟೀಕೆ ಮಾಡಿದ ಎಲ್ಲರಿಗೂ ಸರಯಾಗಿಯೇ ಉತ್ತರ ನೀಡಿದ್ದಾರೆ. “ನನ್ನ ಟಿ20 ಕ್ರಿಕೆಟ್ ಜೀವನ ಮುಗಿಯಿತು ಎಂದು ಬಹಳಷ್ಟು ಜನರು ಭಾವಿಸಿದ್ದರು, ಆದರೆ ನನಗೆ ಹಾಗೆ ಅನಿಸುವುದಿಲ್ಲ. ನಾನು ಮತ್ತೆ ನನ್ನ ಅತ್ಯುತ್ತಮ ಕ್ರಿಕೆಟ್ ಪ್ರದರ್ಶನವನ್ನು ತೋರ್ಪಡಿಸುತ್ತಿದ್ದೇನೆ. ನಾನು ಸರಿಯಾಗಿಯೇ ಟಿ20 ಕ್ರಿಕೆಟ್ ಆಡುತ್ತಿದ್ದೇನೆ ಎಂದು ನನಗನಿಸುತ್ತಿದೆ. ನಾನು ನನ್ನ ಆಟವನ್ನು ಆನಂದಿಸುತ್ತಿದ್ದೇನೆ” ಎಂದು ಹೇಳುವ ಮೂಲಕ ತಮ್ಮ ಸ್ಟ್ರೇಕ್ ರೇಟ್ ಬಗ್ಗೆ ಮಾತನಾಡಿದ್ದ ಹಲವರಿಗೆ ಇಲ್ಲಿ ಕೊಹ್ಲಿ ಪರೋಕ್ಷವಾಗಿ ಟಾಂಗ್ ನೀಡಿದರು.
ಇದನ್ನೂ ಓದಿ IPL 2023: ಕರ್ಮ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ; ಜಡೇಜಾ ಹೀಗೆ ಹೇಳಿದ್ದು ಯಾರಿಗೆ?
ಈ ಆವೃತ್ತಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ತೋರಿದ ಪ್ರದರ್ಶನಕ್ಕೆ ಭೇಷ್ ಎನ್ನಲೇಬೇಕು ಆರ್ಸಿಬಿ ತಂಡದ ಈ ಬಾರಿಯ ಗೆಲುವಿನಲ್ಲಿ ಕೊಹ್ಲಿ ಪಾತ್ರ ಮಹತ್ವದ್ದಾಗಿತ್ತು. 2 ಶತಕ ಮತ್ತು ಕೆಲವು ಅರ್ಧಶತಕದ ಮೂಲಕ ತಂಡದ ನೆರವಿಗೆ ನಿಂತಿದ್ದರು. ಸದ್ಯ ಮುಂದಿನ ತಿಂಗಳು ಆಸೀಸ್ ವಿರುದ್ಧ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿಯೂ ಕೊಹ್ಲಿ ಬ್ಯಾಟಿಂಗ್ ಮೇಲೆ ಟೀಮ್ ಇಂಡಿಯಾ ಭಾರಿ ನಿರೀಕ್ಷೆ ಇಟ್ಟಿದೆ.