ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಮೂರು ರನ್ ಗೆಲುವು ಸಾಧಿಸಿದ್ದರೂ ಅಂಪೈರ್ಗಳ ನಿರ್ಧಾರಕ್ಕೆ ಆರ್. ಅಶ್ವಿನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಬಾರಿಯ ಐಪಿಎಲ್(IPL 2023) ಟೂರ್ನಿಯಲ್ಲಿ ಚಾಲ್ತಿಗೆ ತಂದ ಕೆಲ ನೂತನ ನಿಯದ ಬಗ್ಗೆಯೂ ಅವರು ಅಸಮಾಧಾನ ಹೊರಹಾಕಿದ್ದಾರೆ.
ಚೆನ್ನೈಯ ಚೆಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಜಸ್ಥಾನ್ ನಿಗದಿತ 20 ಓವರ್ಗಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತನ್ನ ಪಾಲಿನ ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಬಾರಿಸಿ ಕೇವಲ ಮೂರು ರನ್ ಅಂತರದಿಂದ ಸೋಲು ಕಂಡಿತು.
ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಆರ್.ಅಶ್ವಿನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಬಳಿಕ ಮಾತನಾಡಿದ ಅವರು, ಪಂದ್ಯದಲ್ಲಿ ಇಬ್ಬನಿಯ ಕಾರಣಕ್ಕೆ ತಾವಾಗಿಯೇ ಚೆಂಡನ್ನು ಬದಲಾಯಿಸುವ ಅಂಪೈರ್ಗಳ ನಿರ್ಧಾರ ಸರಿಯಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ IPL 2023: ರೀಸ್ ಟಾಪ್ಲಿಗೆ ಶಸ್ತ್ರಚಿಕಿತ್ಸೆ; ಚೇತರಿಕೆಗೆ ಹಾರೈಸಿದ ಆರ್ಸಿಬಿ
“ಚೆನ್ನೈ ತಂಡ ಚೇಸಿಂಗ್ ನಡೆಸುವ ವೇಳೆ ಇಬ್ಬನಿಯ ಕಾರಣದಿಂದ ಅಂಪೈರ್ಗಳು ಏಕಾಏಕಿ ಚೆಂಡನ್ನು ಬದಲಾಯಿಸಿದರು. ಈ ರೀತಿ ಅಂಪೈರ್ಗಳು ತಾವಾಗಿಯೇ ಚೆಂಡನ್ನು ಬದಲಾಯಿಸುವುದನ್ನು ಹಿಂದೆಂದೂ ನಾನು ಕ್ರಿಕೆಟ್ನಲ್ಲಿ ನೋಡಿರಲಿಲ್ಲ ಮತ್ತು ಕೇಳಿರಲಿಲ್ಲ ಇದು ಆಶ್ಚರ್ಯವಾಗಿದೆ” ಎಂದು ಅಶ್ವಿನ್ ಹೇಳಿದರು.
“ಬೌಲಿಂಗ್ ತಂಡವಾಗಿ ನಾವೇ ಚೆಂಡನ್ನು ಬದಲಾಯಿಸಲು ಕೇಳಿಲ್ಲ. ಹೀಗಿರುವಾಗ ಅಂಪೈರ್ಗಳು ಚೆಂಡನ್ನು ಹೇಗೆ ಬದಲಾಯಿಸಿದರು. ನಿಜಕ್ಕೂ ಈ ಬಾರಿಯ ಟೂರ್ನಿಯಲ್ಲಿ ಅಂಪೈರ್ಗಳ ಕೆಲ ನಿರ್ಧಾರಗಳು ಅತ್ಯಂತ ಕಳಪೆ ಮಟ್ಟದಿಂದ ಕೂಡಿದೆ. ಇನ್ನು ಕೆಲ ಹೊಸ ನಿಯಮದಿಂದ ನೈಜ ಕ್ರಿಕೆಟ್ನ ಸ್ವರೂಪ ಬದಲಾಗುತ್ತಿದೆ” ಎಂದು ಅಶ್ವಿನ್ ಬೇಸರ ವ್ಯಕ್ತಪಡಿಸಿದರು.
ರಹಾನೆ ಮತ್ತು ಅಶ್ವಿನ್ ಜತೆ ಮೈದಾನಲ್ಲೇ ಜಟಾಪಟಿ
ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಳಿದ ಅಜಿಂಕ್ಯ ರಹಾನೆ 19 ಎಸೆತಗಳಲ್ಲಿ 31 ರನ್ ಬಾರಿಸಿದ್ದರು. ಈ ನಡುವೆ ಅವರು ಹಿರಿಯ ಬೌಲರ್ ಆರ್ ಅಶ್ವಿನ್ ಅವರೊಂದಿಗೆ ಮೈದಾನದಲ್ಲೇ ಜಟಾಪಟಿ ನಡೆಸಿದರು. ಪವರ್ ಪ್ಲೇ ಅವಧಿಯ ಕೊನೇ ಓವರ್ (6ನೇ ಓವರ್) ಎಸೆದಿದ್ದು ಆರ್. ಅಶ್ವಿನ್. ಈ ಓವರ್ನಲ್ಲಿ ಆರ್. ಅಶ್ವಿನ್ ಚೆಂಡೆಸೆಯಲು ಮುಂದೆ ಬಂದಾಗ ಅಜಿಂಕ್ಯ ರಹಾನೆ ಒಂದು ಹೆಜ್ಜೆ ಮುಂದೆ ಇಟ್ಟರು. ತಕ್ಷಣ ಅಶ್ವಿನ್ ಚೆಂಡೆಸೆಯದೇ ಸುಮ್ಮನೆ ನಿಂತರು. ಇದರಿಂದ ಅಜಿಂಕ್ಯ ರಹಾನೆಗೆ ನಿರಾಸೆ ಎದುರಾಯಿತು. ಪ್ರತಿಕಾರವಾಗಿ ಅಶ್ವಿನ್ ಮುಂದಿನ ಎಸೆತ ಎಸೆಯುವ ವೇಳೆ ಅಜಿಂಕ್ಯ ರಹಾನೆ ಹಿಂದಕ್ಕೆ ಸರಿದರು. ಇವರಿಬ್ಬರ ಈ ಜಟಾಪಟಿ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿದೆ.